ಅಂದಿನಿಂದ ಇಂದಿನವರೆಗೂ ದೇಶದಲ್ಲಿಯೇ ಮನೆಮಾತಾದ ಬಿಸ್ಕೆಟ್ ಎಂದರೆ ಅದು ಪಾರ್ಲೆ ಜಿ.
ಇದಕ್ಕೆ ಬಡವ, ಶ್ರೀಮಂತ ಎಂಬ ಬೇಧವಿಲ್ಲ. ಚಹಾ ಕಪ್ ಪಕ್ಕದಲ್ಲಿ ಇದು ಯಾವಾಗಲೂ ಒಂಥರಾ ನೆರಳು ಇದ್ದಂತೆ.
ಅನೇಕ ಪೀಳಿಗೆಗಳ ಬಾಲ್ಯದ ನೆನಪುಗಳ ಜೊತೆ ಈ ಬಿಸ್ಕೆಟ್ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇಂದು ಮಾರುಕಟ್ಟೆಯಲ್ಲಿ ನೂರಾರು ಹೊಸ ಹೊಸ ಬಿಸ್ಕೆಟ್‌ಗಳು ಬರುತ್ತಿದ್ದರೂ ಪಾರ್ಲೆ ಜಿ ಮಾತ್ರ ಎಲ್ಲರ ಮನದಲ್ಲಿ ಇಂದೂ ತನ್ನದೇ ವಿಶೇಷ ಸ್ಥಾನ ಪಡೆದುಕೊಂಡಿದೆ.
ಇಷ್ಟಕ್ಕೂ ಪಾರ್ಲೆ ಜಿ ಪ್ಯಾಕೆಟ್ ಮೇಲೆ ಕಾಣಿಸುವ ಆ ಮುದ್ದಾದ ಮಗು ಯಾರು?

ಈ ವಿಚಾರದ ಬಗ್ಗೆ ಚರ್ಚೆ 90ರ ದಶಕದಲ್ಲಿ ಮುನ್ನೆಲೆಗೆ ಬಂದಿದ್ದ ಸಂದರ್ಭ ಕೆಲವರು ಅದು ಖ್ಯಾತ ಲೇಖಕಿ, ಸಮಾಜ ಸೇವಕಿ ಸುಧಾಮೂರ್ತಿ ಅವರ ಬಾಲ್ಯದ ಚಿತ್ರ ಎಂದಿದ್ದರು. ಇನ್ನು ಕೆಲವರು ಅಲ್ಲಲ್ಲ ಅದು ನೀರು ದೇಶಪಾಂಡೆ ಎಂದಿದ್ದರು. ಗುಂಜನ್ ಗುಂಡನಿಯಾ ಎಂಬ ಹೆಸರು ಕೂಡ ಆಗ ಕೇಳಿಬಂದಿತ್ತು. ಹೀಗೆ ಫೋಟೋ ಹಿಂದಿನ ಒಂದೊಂದೇ ಕಥೆಗಳು ಹರಿದಾಡುತ್ತಿದ್ದಂತೆ ಜನರ ಕುತೂಹಲವೂ ಹೆಚ್ಚುತ್ತಲೇ ಹೋಯಿತು. ಇದಕ್ಕೆ ಪೂರಕವಾಗಿ ಮಾಧ್ಯಮಗಳೂ ಈ ರಹಸ್ಯಕ್ಕೆ ಇನ್ನಷ್ಟು ರಂಗು ತುಂಬಿದವು. ಕೆಲವು ಪ್ರಾದೇಶಿಕ ಪತ್ರಿಕೆಗಳು ನೀರು ದೇಶಪಾಂಡೆ ಅವರ ಫೋಟೋ ಪ್ರಕಟಿಸಿ, ಅವರು ನಾಗಪುರ ಮೂಲದವರು, ಸರಳ ಕುಟುಂಬದಲ್ಲಿ ಬೆಳೆದವರು ಎಂದೆಲ್ಲಾ ಬರೆದವು. ಅವರ ತಂದೆ ವೃತ್ತಿಪರ ಛಾಯಾಗ್ರಾಹಕರಲ್ಲದಿದ್ದರೂ, ಅವರು ನಾಲ್ಕು ವರ್ಷದಾಗಿದ್ದಾಗ ತೆಗೆದ ಒಂದು ಅಪರೂಪದ ಫೋಟೋವನ್ನೇ ಪಾರ್ಲೆ ಜಿ ತಮ್ಮ ಬಿಸ್ಕೆಟ್ ಪ್ಯಾಕೆಟ್‌ಗೆ ಆಯ್ಕೆ ಮಾಡಿದೆ ಎಂಬ ಕಥೆ ಭಾರೀ ಪ್ರಚಾರ ಪಡೆದಿತ್ತು. ಆದರೆ ನಿಜಾಂಶ ಬೇರೆ ಇತ್ತು!
ಚರ್ಚೆ ಹೆಚ್ಚುತ್ತಿರುವ ನಡುವೆಯೇ ಈ ನಿಗೂಢತೆಗೆ ಖುದ್ದು ಪಾರ್ಲೆ ಪ್ರಾಡಕ್ಟ್‌ನ ಉತ್ಪನ್ನ ವಿಭಾಗದ ವ್ಯವಸ್ಥಾಪಕರು ತೆರೆ ಎಳೆದರು. ಪ್ಯಾಕೆಟ್ ಮೇಲೆ ಕಾಣಿಸುವ ಆ ಮಗು ನಿಜವಾದ ಫೋಟೋ ಅಲ್ಲ, ಅದು 1960ರ ದಶಕದಲ್ಲಿ ಖಾಸಗಿ ಸಂಸೆಯೊಂದರ ಸೃಜನಾತ್ಮಕ ತಂಡ ರೂಪಿಸಿದ ಒಂದು ಚಿತ್ರ ಎಂಬ ಮಾಹಿತಿ ಬಹಿರಂಗಗೊಳಿಸಿದರು. ನಿಜಾಂಶ ಗೊತ್ತಾಗುತ್ತಲೇ ವರ್ಷಗಳ ಕಾಲ ನಮ್ಮನ್ನು ಕುತೂಹಲದಲ್ಲಿ ಇಟ್ಟಿದ್ದ ಆ ಮಗು ವಾಸ್ತವದಲ್ಲಿ ಕಲಾವಿದರ ಕಲ್ಪನೆಯ ಫಲ ಎಂದು ತಿಳಿದು ಅಚ್ಚರಿಪಡುವ ಸರದಿ ಪಾರ್ಲೆ ಜಿ ಅಭಿಮಾನಿಗಳದ್ದಾಗಿತ್ತು.
ಎಸ್, ಪಾರ್ಲೆ-ಜಿ ಪ್ಯಾಕೆಟ್‌ನ ಆ ಮುದ್ದಾದ ಮುಖ ನಿಜವಾದ ವ್ಯಕ್ತಿಯದ್ದಲ್ಲದೇ ಇರಬಹುದು. ಆದರೆ ಅದು ನಮ್ಮ ಬಾಲ್ಯದ ಸಿಹಿ ನೆನಪುಗಳಿಗೆ ಕೊಂಡಿಯಾಗಿ ಉಳಿದುಕೊಂಡಿದೆ ಎಂಬುದಂತೂ ನಿಜ.

