ಗೆಂಘಿಸ್ ಖಾನ್: ಜಗತ್ತನ್ನೇ ನಡುಗಿಸಿದ ಸಾಮ್ರಾಟ
ಅವಧಿ ಕೆ. ದೇಸಿ ಪೋಸ್ಟ್ ನ್ಯೂಸ್ ಡೆಸ್ಕ್
ಒಬ್ಬ ಮನುಷ್ಯನ ಬಾಲ್ಯ ಹೇಗಿತ್ತು ಎಂಬುದು ಅವನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ನಾವು ಹೇಳುತ್ತೇವೆ. ಆದರೆ ಗೆಂಘಿಸ್ ಖಾನ್‌ನ ಕಥೆ ಮಾತ್ರ ಅದಕ್ಕೆ ತದ್ವಿರುದ್ದ!
ಕರುಳನ್ನೇ ಸುಡುವ ಹಸಿವು, ಮನೆಯ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡ ನೋವು, ತನ್ನದೇ ಕುಲದಿಂದ ಹೊರಹಾಕಲ್ಪಟ್ಟ ಅವಮಾನದ ಜೀವನ, ಗುಲಾಮನಾಗಿ ಹಿಂಸೆ ಪಡುತ್ತಾ ಬಂಧನದಲ್ಲೇ ಕಳೆದ ದಿನಗಳು… ಇವೆಲ್ಲ ಒಬ್ಬ ಬಾಲಕ ಹುಲ್ಲುಗಾವಲುಗಳಿಂದ ಎದ್ದು ನಿಂತು, ಇತಿಹಾಸ ಕಂಡ ಅತ್ಯಂತ ವಿಶಾಲ ಭೂಸಾಮ್ರಾಜ್ಯಗಳಲ್ಲಿ ಒಂದನ್ನು ಅತ್ಯಂತ ಕ್ರೂರ ರೀತಿಯಲ್ಲಿ ಕಟ್ಟಲು ಕಾರಣವಾಯಿತಾ? ಪೂರ್ತಿ ಓದಿ ನೀವೇ ಒಂದು ನಿರ್ಧಾರಕ್ಕೆ ಬನ್ನಿ.

ಜಗತ್ತೇ ಅವನನ್ನು ಗುರುತಿಸುವುದು ಗೆಂಘಿಸ್ ಖಾನ್ ಎಂಬ ಹೆಸರಲ್ಲಿ. ಅದು ಸುಮಾರು 1162ರ ಅವಧಿ. ಮಧ್ಯ ಏಷ್ಯಾದ ಹುಲ್ಲುಗಾವಲು ಪ್ರದೇಶದಲ್ಲಿ ಜನಿಸಿದ ಈ ಬಾಲಕನ ಬಾಲ್ಯ ಅಕ್ಷರಶಃ ಹೋರಾಟವೇ ಆಗಿತ್ತು. ತಂದೆಯ ಸಾವು, ಕುಟುಂಬದ ನಿರ್ಗತಿಕ ಸ್ಥಿತಿ, ಬಂಧನ ಮತ್ತು ಬದುಕಿಗಾಗಿ ನಡೆಸಿದ ಹೋರಾಟ… ಇವೆಲ್ಲವನ್ನು ದಾಟಿ ಬೆಳೆದ ಟೆಮುಜಿನ್ ಹಿಂದಿದ್ದ ಶಕ್ತಿ ಎಂದರೆ ಛಲ. ಮುಂದೆ ಮಂಗೋಲೀಯರ ವಿವಿಧ ಬುಡಕಟ್ಟುಗಳನ್ನು ತನ್ನ ನಾಯಕತ್ವದಡಿ ಒಗ್ಗೂಡಿಸಿದ ಈತ, 1206ರಲ್ಲಿ ‘ಗೆಂಘಿಸ್ ಖಾನ್’ ಎಂಬ ಬಿರುದಿನೊಂದಿಗೆ ಮಂಗೋಲೀಯರ ನಾಯಕನಾಗಿ ಘೋಷಿಸಲ್ಪಡುತ್ತಾನೆ. ಅಲ್ಲಿಂದ ಆರಂಭವಾದ ಅವನ ರಕ್ತಸಿಕ್ತ ‘ವಿಜಯ ಯಾತ್ರೆ’ ಏಷ್ಯಾದ ವಿಶಾಲ ಪ್ರದೇಶಗಳನ್ನು ದಾಟಿ ಯುರೋಪಿನ ಬಾಗಿಲಿನವರೆಗೂ ಬಂದು ತಲುಪುತ್ತದೆ.
ಗೆಂಘಿಸ್ ಖಾನ್ ಎಂದರೆ ಕೇವಲ ಯುದ್ಧಗಳ ಕಥೆಯಲ್ಲ..
ಗೆಂಘಿಸ್ ಖಾನ್ ವ್ಯಕ್ತಿತ್ವ ಎಂದರೆ ರಾಜಕೀಯ ತಂತ್ರಗಾರಿಕೆ, ಪ್ರತಿಭೆಗಳನ್ನು ಗುರುತಿಸುವ ಸಾಮರ್ಥ್ಯ, ಧಾರ್ಮಿಕ ಸಹಿಷ್ಣುತೆ ಮತ್ತು ಅತ್ಯಂತ ಕಠಿಣ ಯುದ್ಧನೀತಿ… ಹೀಗೆ ಎಲ್ಲವುಗಳ ಚೌ ಚೌ ಬಾತ್! ಹಾಗಾದರೆ ಈ ವ್ಯಕ್ತಿಯ ಬಗ್ಗೆ ಇತಿಹಾಸದಲ್ಲಿ ಹೆಚ್ಚು ಬೆಳಕು ಬಿಲದ ಸಂಗತಿಗಳೇನು? ನೋಡೋಣ ಬನ್ನಿ,
‘ಗೆಂಘಿಸ್ ಖಾನ್’ ಅವನ ನಿಜವಾದ ಹೆಸರು ಅಲ್ಲ
ಜಗತ್ತು ಇಂದು ‘ಗೆಂಘಿಸ್ ಖಾನ್’ ಎಂದು ಕರೆಯುವ ವ್ಯಕ್ತಿಯ ಮೂಲ ಹೆಸರು ಅದಲ್ಲ. ಆತ ಟೆಮುಜಿನ್. ಸುಮಾರು 1162ರಲ್ಲಿ ಒನೊನ್ ನದಿಯ ತೀರ ಪ್ರದೇಶದಲ್ಲಿ ಜನಿಸಿದ ಈತನಿಗೆ ಹೆತ್ತವರು ಟೆಮುಜಿನ್ ಎಂದು ಹೆಸರಿಟ್ಟಿದ್ದರು.

ಟೆಮುಜಿನ್ ಎಂದರೆ ‘ಕಬ್ಬಿಣ’ ಅಥವಾ ‘ಕಮ್ಮಾರ’ ಎಂಬ ಅರ್ಥ. ಮುಂದೆ ‘ಗೆಂಘಿಸ್ ಖಾನ್’ ಎಂಬ ಹೆಸರು ಅವನಿಗೆ ಬಂದಿದ್ದು 1206ರಲ್ಲಿ ನಡೆದ ಕುರಿಲ್ತೈ ಎಂಬ ಬುಡಕಟ್ಟು ನಾಯಕರ ಸಭೆಯಲ್ಲಿ ಮಂಗೋಲೀಯರ ನಾಯಕನಾಗಿ ಘೋಷಿಸಲ್ಪಟ್ಟಾಗ. ಇಲ್ಲಿ ‘ಗೆಂಘಿಸ್’ ಪದದ ಮೂಲ ಅರ್ಥದ ಬಗ್ಗೆ ಇತಿಹಾಸಕಾರರಲ್ಲಿ ಸಂಪೂರ್ಣ ಒಮ್ಮತವಿಲ್ಲ. ಅದನ್ನು ‘ಸಾರ್ವತ್ರಿಕ ಆಡಳಿತಗಾರ’ ಅಥವಾ ‘ಸರ್ವೋಚ್ಚ ಆಡಳಿತಗಾರ’ ಎಂಬ ಅರ್ಥದಲ್ಲಿ ವಿವರಿಸಲಾಗುತ್ತದೆ. ‘ಖಾನ್’ ಎಂಬುದು ನಾಯಕ ಅಥವಾ ಆಡಳಿತಗಾರ ಎಂಬ ಅರ್ಥದ ಬಿರುದು.
ಬಾಲ್ಯವೇ ಒಂದು ಬದುಕುಳಿಯಲು ನಡೆದ ಹೋರಾಟ
ಟೆಮುಜಿನ್‌ಗೆ ಸುಮಾರು ಒಂಬತ್ತು ವರ್ಷವಾಗಿದ್ದಾಗ ಅವನ ತಂದೆ ಯೆಸುಗೆೈ ವಿರೋಧಿ ಟಾಟರ್‌ಗಳಿಂದ ವಿಷಪ್ರಯೋಗಕ್ಕೆ ಒಳಗಾಗಿ ಮೃತಪಟ್ಟರು ಎಂದು ಇತಿಹಾಸದ ಮೂಲಗಳು ಹೇಳುತ್ತವೆ. ನಂತರ ಕುಟುಂಬಕ್ಕೆ ಪರಿಸ್ಥಿತಿ ಮತ್ತಷ್ಟು ಕಠಿಣವಾಯಿತು. ಅವನದೇ ಬುಡಕಟ್ಟು, ಆತನ ಕುಟುಂಬವನ್ನು ತೊರೆದುಹೋದ ಕಾರಣ, ತಾಯಿ ಹೊಯೆಲುನ್ ತನ್ನ ಮಕ್ಕಳನ್ನು ಬಹುತೇಕ ಸ್ವತಃ ಬೆಳೆಸಬೇಕಾಯಿತು. ಆ ಕುಟುಂಬದ ಬದುಕು ಬೇಟೆ ಮತ್ತು ಕಾಡಿನಲ್ಲಿ ಸಿಗುವ ಆಹಾರದ ಮೇಲೆ ಅವಲಂಬಿತವಾಗಿತ್ತು. ಹಸಿವು ಎಷ್ಟು ಕಠಿಣವಾಗಿತ್ತೆಂದರೆ, ಆಹಾರಕ್ಕಾಗಿ ನಡೆದ ಜಗಳದಲ್ಲಿ ಟೆಮುಜಿನ್ ತನ್ನ ಮಲಸಹೋದರನನ್ನು ಕೊಂದಿರಬಹುದು ಎಂಬ ವಿವರವೂ ಐತಿಹಾಸಿಕ ಮೂಲಗಳಲ್ಲಿ ಕಾಣಸಿಗುತ್ತದೆ. ಆದರೆ ಈ ಘಟನೆಗೆ ಸಂಬಂಧಿಸಿದ ವಿವರಗಳನ್ನು ಇತಿಹಾಸದ ಮೂಲಗಳು ವಿಭಿನ್ನವಾಗಿ ದಾಖಲಿಸಿವೆ.

ಇಷ್ಟೇ ಅಲ್ಲ, ಯುವಕನಾಗಿದ್ದಾಗ ಟೆಮುಜಿನ್ ಮತ್ತು ಅವನ ಪತ್ನಿ ಬೋರ್ಟೆಯನ್ನು ಎದುರಾಳಿ ಗುಂಪುಗಳು ಅಪಹರಿಸಿದ್ದವು. ಟೆಮುಜಿನ್ ಒಂದು ಹಂತದಲ್ಲಿ ಗುಲಾಮನಾಗಿಯೂ ಬಂಧಿಸಲ್ಪಟ್ಟಿದ್ದ. ಆದರೆ ಆತ ಅಲ್ಲಿಂದ ತಪ್ಪಿಸಿಕೊಂಡ ಎನ್ನುತ್ತದೆ ಇತಿಹಾಸ. ಆಮೇಲೆ ನಿಧಾನವಾಗಿ ತನ್ನ ಸುತ್ತಲೂ ಬೆಂಬಲಿಗರನ್ನು ಸೇರಿಸಿಕೊಳ್ಳತೊಡಗಿದ ಆತನಲ್ಲಿ ಆತನಿಗೇ ಅರಿವಿಲ್ಲದಂತೆ ನಾಯಕನೊಬ್ಬ ಹುಟ್ಟಿಕೊಳ್ಳುತ್ತಿದ್ದ.
ಅವನ ಮುಖ ಹೇಗಿತ್ತು ಎಂಬುದೇ ಖಚಿತವಿಲ್ಲ!
ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ವ್ಯಕ್ತಿಯ ಬಗ್ಗೆ ಇನ್ನೂ ಒಂದು ವಿಚಿತ್ರ ಸಂಗತಿ ಇದೆ. ಅವನ ನಿಜವಾದ ಮುಖ ಹೇಗಿತ್ತು ಎಂಬುದಕ್ಕೆ ಯಾವುದೇ ಖಚಿತ ಚಿತ್ರ ಇಂದಿಗೂ ಲಭ್ಯವಿಲ್ಲ. ತನ್ನ ಯಾವುದೇ ಭಾವಚಿತ್ರ, ಶಿಲ್ಪಗಳನ್ನೂ ರಚಿಸದಂತೆ ಆತ ಆದೇಶ ಮಾಡಿದ್ದ ಎಂಬ ಅಂಶಗಳೂ ಇತಿಹಾಸ ಪುಟಗಳಲ್ಲಿ ಕಾಣಿಸುತ್ತದೆ. ಲಭ್ಯವಿರುವ ಚಿತ್ರಗಳ ವಿವರಣೆಗಳಲ್ಲೂ ವ್ಯತ್ಯಾಸಗಳಿವೆ. ಕೆಲವಲ್ಲಿ ಅವನನ್ನು ಎತ್ತರದ, ಬಲಿಷ್ಠ ದೇಹದ, ಉದ್ದ ಕೂದಲು ಮತ್ತು ಗಡ್ಡ ಹೊಂದಿದ್ದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. 14ನೇ ಶತಮಾನದ ಪರ್ಷಿಯನ್ ಇತಿಹಾಸಕಾರ ರಶೀದ್ ಅಲ್-ದೀನ್, ಅವನಿಗೆ ಕೆಂಪು ಕೂದಲು ಮತ್ತು ಹಸಿರು ಕಣ್ಣುಗಳಿದ್ದವು ಎಂದು ಬರೆದಿದ್ದಾರೆ. ಆದರೆ ಅವರು ಗೆಂಘಿಸ್ ಖಾನ್ ನನ್ನು ವೈಯಕ್ತಿಕವಾಗಿ ನೋಡಿರಲಿಲ್ಲ. ಹೀಗಾಗಿ ಇದನ್ನು ಖಚಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಂದರೆ ಇಂದು ನಾವು ನೋಡುತ್ತಿರುವ ಗೆಂಘಿಸ್ ಖಾನ್‌ನ ಪ್ರಸಿದ್ಧ ಚಿತ್ರಗಳು ಬಹುತೇಕ ನಂತರದ ಕಲ್ಪನೆಗಳು ಮತ್ತು ಪುನರ್‌ನಿರ್ಮಾಣಗಳು ಮಾತ್ರ.
ತನ್ನನ್ನು ಸೋಲಿಸಲು ಬಂದ ಬಿಲ್ಲುಗಾರನನ್ನೇ ಸೇನಾನಾಯಕನನ್ನಾಗಿ ಮಾಡಿದ!
ಇದು ಗೆಂಘಿಸ್ ಖಾನ್‌ನ ನಾಯಕತ್ವದ ವಿಚಿತ್ರ ಮುಖ. 1201ರ ಸುಮಾರಿಗೆ ನಡೆದ ಯುದ್ಧವೊಂದರಲ್ಲಿ ಟೆಮುಜಿನ್‌ನ ಕುದುರೆಗೆ ಬಾಣ ಬಿದ್ದಿತು. ನಂತರ ಶತ್ರುಗಳ ಬಂಧಿತರನ್ನು ವಿಚಾರಿಸಿದಾಗ, ಒಬ್ಬ ಯೋಧ ಮುಂದೆ ಬಂದು ತಾನೇ ಆ ಬಾಣ ಹಾರಿಸಿದ್ದಾಗಿ ಒಪ್ಪಿಕೊಂಡ. ಅವನಿಗೆ ಶಿಕ್ಷೆ ನೀಡುವ ಬದಲು ಟೆಮುಜಿನ್ ಅವನ ಧೈರ್ಯ ಮತ್ತು ಸಾಮರ್ಥ್ಯವನ್ನು ಗುರುತಿಸಿದ. ಅವನನ್ನು ತನ್ನ ಸೇನೆಗೆ ಸೇರಿಸಿಕೊಂಡ. ಆ ಯೋಧನಿಗೆ ನಂತರ ‘ಜೆಬೆ’ ಎಂಬ ಹೆಸರು ನೀಡಲಾಯಿತು. ‘ಜೆಬೆ’ ಎಂದರೆ ‘ಬಾಣ’ ಎಂದು ಅರ್ಥ. ಮುಂದೆ ಇದೇ ಜೆಬೆ ಮಂಗೋಲರ ಅತ್ಯಂತ ಪ್ರಮುಖ ಸೇನಾನಾಯಕರಲ್ಲಿ ಒಬ್ಬನಾದ. ಸುಬುತೈ ಜೊತೆಯಲ್ಲಿ ಅವನು ಏಷ್ಯಾ ಮತ್ತು ಯುರೋಪಿನ ಮಂಗೋಲರ ವಿಜಯಯಾತ್ರೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ. ಇಲ್ಲಿ ಗೆಂಘಿಸ್ ಖಾನ್‌ನ ಒಂದು ಮಹತ್ವದ ಗುಣ ಗೋಚರಿಸುತ್ತದೆ.
ಅವನಿಗೆ ವ್ಯಕ್ತಿಯ ಜನ್ಮಕ್ಕಿಂತ ಅವನ ಸಾಮರ್ಥ್ಯ ಮುಖ್ಯವಾಗಿತ್ತು.
ಗೆಂಘಿಸ್ ಖಾನ್ ಗೆ ಶತ್ರುಗಳ ಜೊತೆಗಿನ ಲೆಕ್ಕ ಮರೆಯುವ ಅಭ್ಯಾಸ ಇರಲಿಲ್ಲ. ಆತ ಹಲವು ಸಂದರ್ಭಗಳಲ್ಲಿ ಎದುರಾಳಿ ರಾಜ್ಯಗಳಿಗೆ ಮಂಗೋಲೀಯರ ಅಧೀನವನ್ನು ಒಪ್ಪಿಕೊಳ್ಳುವ ಅವಕಾಶ ನೀಡುತ್ತಿದ್ದ. ಆದರೆ ವಿರೋಧಿಸಿದರೆ ಪರಿಣಾಮ ಕಠಿಣವಾಗುತ್ತಿತ್ತು. 1219ರಲ್ಲಿ ಖ್ವಾರೆಜ್ಮಿಯನ್ ಸಾಮ್ರಾಜ್ಯದೊಂದಿಗೆ ನಡೆದ ಸಂಘರ್ಷ ಇದಕ್ಕೆ ಪ್ರಮುಖ ಉದಾಹರಣೆ. ಅಂದು ವ್ಯಾಪಾರ ಮತ್ತು ಸಿಲ್ಕ್ ರೋಡ್ ಮೂಲಕ ಸರಕು ವಿನಿಮಯಕ್ಕಾಗಿ ಸಂಬಂಧ ಬೆಳೆಸಲು ಗೆಂಘಿಸ್ ಖಾನ್ ಮುಂದಾಗಿದ್ದ. ಆದರೆ ಮಂಗೋಲರ ರಾಯಭಾರಿಗಳು ಕೊಲ್ಲಲ್ಪಟ್ಟ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಗೆಂಘಿಸ್ ಖಾನ್ ಭಾರೀ ಸೇನೆಯೊಂದಿಗೆ ಖ್ವಾರೆಜ್ಮಿಯನ್ ಪ್ರದೇಶಗಳ ಮೇಲೆ ದಾಳಿ ನಡೆಸಿದ. ಯುದ್ಧವು ಭೀಕರವಾಗಿತ್ತು. ರಕ್ತದ ಹೊಳೆಯೇ ಎಲ್ಲೆಡೆ ಹರಿದಿತ್ತು. ತನ್ನ ಆದೇಶ ಪಾಲಿಸದವರ ವಿರುದ್ಧ ಯುದ್ಧಕ್ಕೆ ಸಿದ್ಧನಾಗುವುದರಲ್ಲಿ ಆತ ಎಂದೂ ಹಿಂದೆ ಸರಿಯುತ್ತಿರಲಿಲ್ಲ.
ಮಂಗೋಲರ ವಿಜಯಗಳ ಮಾಲೆಯಲ್ಲಿ ಲಕ್ಷಾಂತರ ಜೀವಗಳು

ಗೆಂಘಿಸ್ ಖಾನ್‌ನ ಹೆಸರಿನೊಂದಿಗೆ ಕೇಳಿಬರುವ ಅತ್ಯಂತ ಭಯಾನಕ ಅಂಕಿ ಇದು. ಮಂಗೋಲೀಯರ ಗೆಲುವಿನ ಅವಧಿಯಲ್ಲಿ ಸುಮಾರು 4 ಕೋಟಿ ಜನರು ಮೃತಪಟ್ಟಿರಬಹುದು ಎಂದು ಕೆಲವು ಇತಿಹಾಸಕಾರರು ಅಂದಾಜಿಸಿದ್ದಾರೆ. ಆದರೆ ಮಧ್ಯಯುಗದ ಜನಸಂಖ್ಯೆಯ ದಾಖಲೆಗಳು ಸ್ಪಷ್ಟವಿಲ್ಲದ ಕಾರಣ ಇದನ್ನು ನಿಖರ ಸಾವಿನ ಸಂಖ್ಯೆಯಾಗಿ ಪರಿಗಣಿಸಲು ಕೂಡಾ ಸಾಧ್ಯವಿಲ್ಲ. ಆದರೂ ಒಂದು ವಿಷಯ ಮಾತ್ರ ನಿರ್ವಿವಾದ. ಮಂಗೋಲೀಯರ ಯುದ್ಧಗಳು ಏಷ್ಯಾದ ಹಲವು ಪ್ರದೇಶಗಳ ಜನಸಂಖ್ಯೆ, ನಗರಗಳು ಮತ್ತು ರಾಜಕೀಯ ವ್ಯವಸ್ಥೆಗಳ ಮೇಲೆ ಭಾರೀ ಪರಿಣಾಮ ಬೀರಿದ್ದವು. ಅವನ ಸಾಮ್ರಾಜ್ಯದ ವಿಸ್ತರಣೆಯ ಹಿಂದೆ ಗೆಲುವಿನ ಕಥೆಯಷ್ಟೇ ಅಲ್ಲ, ಮಾನವೀಯ, ಅಮಾನುಷ, ದುರಂತದ ಕಥೆಯೂ ಇದೆ.
ಧರ್ಮದ ವಿಷಯದಲ್ಲಿ ಅಚ್ಚರಿಯ ನೀತಿ
ಯುದ್ಧದಲ್ಲಿ ನಿರ್ದಯನಾಗಿದ್ದ ಗೆಂಘಿಸ್ ಖಾನ್ ಧರ್ಮದ ವಿಷಯದಲ್ಲಿ ತುಸು ವಿಭಿನ್ನ ನಿಲುವು ಹೊಂದಿದ್ದ. ಅವನ ಆಳ್ವಿಕೆಯಡಿ ವಿವಿಧ ಧರ್ಮಗಳ ಜನರಿಗೆ ತಮ್ಮ ನಂಬಿಕೆಗಳನ್ನು ಆಚರಿಸಲು ಅವಕಾಶವಿತ್ತು. ಮಂಗೋಲರ ಪ್ರದೇಶಗಳಲ್ಲಿ ನೆಸ್ಟೋರಿಯನ್ ಕ್ರೈಸ್ತರು, ಬೌದ್ಧರು, ಮುಸ್ಲಿಮರು ಮತ್ತು ವಿವಿಧ ಸ್ಥಳೀಯ ನಂಬಿಕೆಗಳ ಜನರು ಇದ್ದರು. ಧಾರ್ಮಿಕ ಕೇಂದ್ರಗಳಿಗೆ ತೆರಿಗೆ ವಿನಾಯಿತಿ ನೀಡಿದ ಉದಾಹರಣೆಗಳೂ ದಾಖಲಾಗಿವೆ. ಗೆಂಘಿಸ್ ಖಾನ್ ಸ್ವತಃ ಆಕಾಶ, ಗಾಳಿ ಮತ್ತು ಪರ್ವತಗಳ ಆತ್ಮಗಳಿಗೆ ಸಂಬಂಧಿಸಿ ನಂಬಿಕೆಗಳನ್ನು ಹೊಂದಿದ್ದ. ಪ್ರಮುಖ ಯುದ್ಧಗಳಿಗೆ ಮುನ್ನ ಆತ ಹಲವು ದಿನಗಳ ಕಾಲ ಪ್ರಾರ್ಥಿಸುತ್ತಿದ್ದನೆಂದು ಇತಿಹಾಸ ಪುಟಗಳು ಹೇಳುತ್ತವೆ. ವಿವಿಧ ಧರ್ಮಗಳ ನಾಯಕರೊಂದಿಗೆ ಆತ ಸಂಭಾಷಣೆ ನಡೆಸುತ್ತಿದ್ದ. ವೃದ್ಧಾಪ್ಯದಲ್ಲಿ ಟಾವೊ ಧರ್ಮದ ನಾಯಕ ಕ್ಯೂ ಚುಜಿ ಅವರನ್ನು ತನ್ನ ಬಳಿಗೆ ಕರೆಸಿಕೊಂಡು ಅಮರತ್ವ ಮತ್ತು ತತ್ತ್ವಶಾಸ್ತ್ರದ ಕುರಿತು ಚರ್ಚಿಸಿದ್ದನೆಂಬ ವಿವರವೂ ಇದೆ.
ಕುದುರೆಯ ವೇಗಕ್ಕಿಂತ ವೇಗವಾಗಿ ಸುದ್ದಿ ಸಾಗಬೇಕು
ಮಂಗೋಲೀಯರ ಶಕ್ತಿಯ ಹಿಂದೆ ಇದ್ದುದು ಕುದುರೆ ಮತ್ತು ಬಿಲ್ಲು. ಇದರ ನಡುವೆ ಮತ್ತೊಂದು ಅಸ್ತ್ರವೂ ಇತ್ತು. ಅದುವೇ ‘ಸುದ್ದಿ’!
ಗೆಂಘಿಸ್ ಖಾನ್ ತನ್ನ ಸಾಮ್ರಾಜ್ಯದಲ್ಲಿ ‘ಯಾಮ್’ ಎಂಬ ಕುದುರೆ ಸವಾರರ ಸಂದೇಶ ವ್ಯವಸ್ಥೆಯನ್ನು ರೂಪಿಸಿದ. ವಿವಿಧ ಪ್ರದೇಶಗಳಲ್ಲಿ ಅಂಚೆ ಕೇಂದ್ರಗಳು ಮತ್ತು ವಿಶ್ರಾಂತಿ ನಿಲ್ದಾಣಗಳನ್ನು ಸ್ಥಾಪಿಸಲಾಗಿತ್ತು. ಸವಾರರು ಒಂದು ಸ್ಥಳದಲ್ಲಿ ಕುದುರೆ ಬದಲಿಸಿಕೊಂಡು ಮತ್ತೊಂದು ಸ್ಥಳಕ್ಕೆ ವೇಗವಾಗಿ ಸಾಗುತ್ತಿದ್ದರು. ಇತಿಹಾಸದ ಪ್ರಕಾರ, ಅಧಿಕೃತ ಸವಾರರು ಒಂದು ದಿನದಲ್ಲಿ ಸುಮಾರು 200 ಮೈಲುಗಳವರೆಗೆ ಪ್ರಯಾಣಿಸಲು ಸಾಧ್ಯವಾಗುತ್ತಿತ್ತು ಎಂದು ವಿವರಿಸಲಾಗಿದೆ. ಈ ವ್ಯವಸ್ಥೆಯಿಂದ ರಾಜಕೀಯ ಮತ್ತು ಸೈನಿಕ ಸುದ್ದಿಗಳು ವೇಗವಾಗಿ ಸಾಗುತ್ತಿದ್ದವು. ವಿದೇಶಿ ವ್ಯಾಪಾರಿಗಳು ಮತ್ತು ಗಣ್ಯರ ಪ್ರಯಾಣಕ್ಕೂ ಇದು ನೆರವಾಗುತ್ತಿತ್ತು. ಅಂದರೆ, ಗೆಂಘಿಸ್ ಖಾನ್ ಕೇವಲ ಕತ್ತಿಯಿಂದ ಸಾಮ್ರಾಜ್ಯ ಕಟ್ಟಲಿಲ್ಲ. ಮಾಹಿತಿಯ ವೇಗವೂ ಅವನ ಸಾಮ್ರಾಜ್ಯದ ಶಕ್ತಿಯಾಗಿತ್ತು.
ಹೇಗೆ ಸತ್ತ? ಸಮಾಧಿ ಎಲ್ಲಿದೆ? ಇಂದಿಗೂ ನಿಗೂಢ
ಜಗತ್ತನ್ನೇ ನಡುಗಿಸಿದ ಗೆಂಘಿಸ್ ಖಾನ್ ಸಾವಿನ ನಿಖರ ಕಾರಣ ಮಾತ್ರ ಇಂದಿಗೂ ಸ್ಪಷ್ಟವಾಗಿಲ್ಲ. ಕುದುರೆಯಿಂದ ಬಿದ್ದು ಉಂಟಾದ ಗಾಯಗಳಿಂದ ಆತ ಮೃತಪಟ್ಟಿರಬಹುದು, ಮಲೇರಿಯಾ ಅಥವಾ ಯುದ್ಧದ ಗಾಯದಂತಹ ಬೇರೆ ಸಾಧ್ಯತೆಗಳಿಂದ ಸಾವನ್ನಪ್ಪಿರಬಹುದು ಎನ್ನಲಾಗುತ್ತದೆ ಆದರೆ ಅವುಗಳಿಗೆ ವಿಶ್ವಾಸಾರ್ಹ ಐತಿಹಾಸಿಕ ಆಧಾರ ಇಲ್ಲ. ಸಾವಿನಷ್ಟೇ ಆತನ ಸಮಾಧಿ ಸ್ಥಳವೂ ನಿಗೂಢವಾಗಿದೆ.

ಗೆಂಘಿಸ್ ಖಾನ್‌ನ ಸಮಾಧಿ ಎಲ್ಲಿದೆ? ಇಂದಿಗೂ ಖಚಿತವಾಗಿ ಯಾರಿಗೂ ಗೊತ್ತಿಲ್ಲ. ಮಂಗೋಲಿಯಾದ ಬುರ್ಖಾನ್ ಖಾಲ್ದುನ್ ಪರ್ವತದ ಸುತ್ತಮುತ್ತ ಅವನ ಸಮಾಧಿ ಇರಬಹುದು ಎಂಬ ಶಂಕೆ ಇದೆ. ಆದರೆ ನಿಖರ ಸ್ಥಳ ಪತ್ತೆಯಾಗಿಲ್ಲ. ಅವನ ಅಂತ್ಯ ಸಂಸ್ಕಾರ ವಿಧಿ ಬಗ್ಗೆ ಹಲವು ದಂತಕಥೆಗಳಿವೆ. ಅವುಗಳಲ್ಲಿ ಕೆಲವು ಕಥೆಗಳ ಪ್ರಕಾರ ಸಮಾಧಿಯ ಸ್ಥಳವನ್ನು ರಹಸ್ಯವಾಗಿಡಲು ಹಲವು ನಿಗೂಢ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಅವುಗಳನ್ನು ಕೂಡಾ ಖಚಿತ ಮಾಹಿತಿ ಎನ್ನುವಂತಿಲ್ಲ.
ಗೆಂಘಿಸ್ ಖಾನ್‌ನ ನೆನಪನ್ನು ಹತ್ತಿಕ್ಕಲು ಪ್ರಯತ್ನ
ಇಂದು ಗೆಂಘಿಸ್ ಖಾನ್ ಮಂಗೋಲಿಯಾದ ರಾಷ್ಟ್ರೀಯ ಗುರುತಿನ ಪ್ರಮುಖ ಸಂಕೇತ. ಆದರೆ 20ನೇ ಶತಮಾನದಲ್ಲಿ ಸೋವಿಯತ್ ಆಳ್ವಿಕೆಯ ಅವಧಿಯಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಮಂಗೋಲಿಯಾದ ರಾಷ್ಟ್ರೀಯತೆಯ ಸಂಕೇತವಾಗಬಹುದೆಂಬ ಕಾರಣದಿಂದ ಗೆಂಘಿಸ್ ಖಾನ್‌ನ ನೆನಪನ್ನು ಹತ್ತಿಕ್ಕಲು ಪ್ರಯತ್ನಿಸಲಾಯಿತು. ಅವನ ಕುರಿತ ವಿಷಯಗಳನ್ನು ಶಾಲಾ ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಯಿತು. ಅವನ ಜನ್ಮಸ್ಥಳಕ್ಕೆ ಯಾತ್ರೆ ಹೋಗುವುದಕ್ಕೂ ನಿರ್ಬಂಧಗಳಿದ್ದವು. 1990ರ ದಶಕದ ಆರಂಭದಲ್ಲಿ ಮಂಗೋಲಿಯಾ ಸ್ವಾತಂತ್ರ್ಯದತ್ತ ಸಾಗಿದ ನಂತರ ಗೆಂಘಿಸ್ ಖಾನ್ ಮತ್ತೆ ದೇಶದ ಸಾರ್ವಜನಿಕ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದ. ಇಂದು ಮಂಗೋಲಿಯಾದ ರಾಜಧಾನಿ ಉಲಾನ್‌ಬಾಟರ್‌ನ ಪ್ರಮುಖ ವಿಮಾನ ನಿಲ್ದಾಣಕ್ಕೆ ಗೆಂಘಿಸ್ ಖಾನ್ ಹೆಸರು ಇದೆ. ಅವನ ಚಿತ್ರ ಮಂಗೋಲಿಯಾದ ಕರೆನ್ಸಿಯ ಮೇಲೂ ಕಾಣಿಸುತ್ತದೆ.
ಗೆಂಘಿಸ್ ಖಾನ್‌ನನ್ನು ಕೇವಲ ‘ಕ್ರೂರ ವಿಜಯಿ’ ಎಂದು ನೋಡುವುದೂ ಸರಿಯಲ್ಲ. ಹಾಗೆಂದು ‘ಮಹಾನ್ ನಾಯಕ’ ಎಂದು ಕರೆದರೆ ಇತಿಹಾಸದ ಇನ್ನೊಂದು ಭಾಗ ಮರೆಮಾಚಿದಂತೆ. ಆತ ಎರಡೂ ಮುಖಗಳನ್ನು ಹೊಂದಿದ್ದ ವ್ಯಕ್ತಿ. ಅಂದಹಾಗೆ ಗೆಂಘಿಸ್ ಖಾನ್ ಮಹಾನ್ ವಿಜಯಿಯೇ? ಕ್ರೂರ ಸಾಮ್ರಾಟನೇ?
ಇತಿಹಾಸದಲ್ಲಿ ಕಾಣಸಿಗುವ ಕೆಲ ವ್ಯಕ್ತಿಗಳನ್ನು ಒಂದೇ ಪದದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
Disclaimer: ಈ ಲೇಖನವು ಲಭ್ಯವಿರುವ ಐತಿಹಾಸಿಕ ದಾಖಲೆಗಳು ಮತ್ತು ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ಮಾಹಿತಿ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ. ಇತಿಹಾಸದ ಕೆಲವು ಘಟನೆಗಳು ಮತ್ತು ವಿವರಗಳ ಕುರಿತು ವಿವಿಧ ಮೂಲಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು.

