- ಸುಬ್ಬ ಎಂ. ದೇಸಿಪೋಸ್ಟ್ ಡೆಸ್ಕ್
ಮನೆಯ ಮೂಲೆ, ಕಿಟಕಿಯ ಬಳಿ ಅಥವಾ ನಿಮ್ಮ ಕಾಲಿನ ಸುತ್ತ ಮುದ್ದಾಗಿ ಓಡಾಡುವ ಬೆಕ್ಕನ್ನು ನಾವು ಬಹಳ ಸರಳವಾದ ಸಾಕುಪ್ರಾಣಿಯಂತೆ ನೋಡುತ್ತೇವೆ. ಆದರೆ ಅದರ ದೇಹದ ರಚನೆ, ಇಂದ್ರಿಯಗಳ ಸಾಮರ್ಥ್ಯ ಮತ್ತು ಮನುಷ್ಯರೊಂದಿಗೆ ಬೆಳೆಸಿಕೊಂಡಿರುವ ಸಂವಹನದ ಹಿಂದೆ ಕುತೂಹಲಕಾರಿ ಸಂಗತಿಗಳಿವೆ ಎಂಬುದು ನಿಮಗೆ ಗೊತ್ತಾ? ಬೆಕ್ಕನ್ನು ಇನ್ನಷ್ಟು ಹತ್ತಿರದಿಂದ ನೋಡಿ, ಅದು ಕೇವಲ ಒಂದು ಮುದ್ದಾದ ಪ್ರಾಣಿಯಲ್ಲ… ಪ್ರಕೃತಿಯ ಅದ್ಭುತ ವಿನ್ಯಾಸ ಎಂಬುದು ಅರ್ಥವಾಗುತ್ತದೆ. ಬೆಕ್ಕುಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಹತ್ತು ಸಂಗತಿಗಳು ಇಲ್ಲಿವೆ.
ಬೆಕ್ಕಿನ ಒಂದು ವರ್ಷ… ಮನುಷ್ಯನಿಗೆ 15 ವರ್ಷ!
ಹೌದು, ಬೆಕ್ಕಿನ ವಯಸ್ಸನ್ನು ಮನುಷ್ಯರ ವಯಸ್ಸಿನಂತೆ ನೇರವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಅಧ್ಯಯನ ವರದಿ ಪ್ರಕಾರ, ಬೆಕ್ಕಿನ ಜೀವನದ ಮೊದಲ ವರ್ಷವು ಮನುಷ್ಯನ ಸುಮಾರು 15 ವರ್ಷಗಳಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಎರಡನೇ ವರ್ಷವು ಮನುಷ್ಯನ ಸುಮಾರು 25 ವರ್ಷಗಳ ಬೆಳವಣಿಗೆಗೆ ಸಮಾನವೆಂದು ಅಂದಾಜಿಸಲಾಗುತ್ತದೆ.
ಅದರ ನಂತರ ವಯಸ್ಸಾಗುವ ವೇಗ ನಿಧಾನವಾಗುತ್ತದೆ. ಪ್ರತಿ 12 ತಿಂಗಳಿಗೆ ಸುಮಾರು ನಾಲ್ಕರಿಂದ ಐದು ಮಾನವ ವರ್ಷಗಳಷ್ಟು ವಯಸ್ಸಾಗುತ್ತದೆ ಎಂದು ವರದಿ ವಿವರಿಸುತ್ತದೆ. ಅಂದರೆ, ಚಿಕ್ಕದಾಗಿ ಕಾಣುವ ನಿಮ್ಮ ಬೆಕ್ಕಿನ ವಯಸ್ಸಿನ ಹಿಂದೆ ಸಾಕಷ್ಟು ದೊಡ್ಡ ‘ಜೀವನದ ಕ್ಯಾಲೆಂಡರ್’ ಅಡಗಿದೆ!
ಬೆಕ್ಕಿನ ಕಿವಿ 180 ಡಿಗ್ರಿ ತಿರುಗುವ ‘ಸೌಂಡ್ ಡಿಟೆಕ್ಟರ್’!
ಬೆಕ್ಕಿನ ಕಿವಿಗಳನ್ನು ಗಮನಿಸಿದ್ದೀರಾ? ಸಣ್ಣ ಶಬ್ದವಾದರೂ ಕಿವಿ ಆ ದಿಕ್ಕಿಗೆ ತಿರುಗುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣ ಅದರ ಕಿವಿಗಳಲ್ಲಿರುವ ವಿಶೇಷ ಸ್ನಾಯುಗಳು. ಮನುಷ್ಯರ ಹೊರಕಿವಿಗಳಲ್ಲಿ ಒಟ್ಟು ಆರು ಸ್ನಾಯುಗಳಿದ್ದರೆ, ಬೆಕ್ಕಿನ ಪ್ರತಿಯೊಂದು ಕಿವಿಯಲ್ಲೂ 32 ಸ್ನಾಯುಗಳಿವೆ ಎಂದು ವರದಿ ಹೇಳುತ್ತದೆ. ಈ ಸ್ನಾಯುಗಳ ನೆರವಿನಿಂದ ಬೆಕ್ಕು ತನ್ನ ಕಿವಿಗಳನ್ನು ಸುಮಾರು 180 ಡಿಗ್ರಿ ತಿರುಗಿಸಿ, ಶಬ್ದ ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಗುರುತಿಸಬಲ್ಲದು. ಹಾಗಾಗಿ ನೀವು ಕೇಳದ ಸಣ್ಣ ಶಬ್ದವನ್ನೂ ನಿಮ್ಮ ಬೆಕ್ಕು ಕೇಳುತ್ತಿರಬಹುದು!
ಮನುಷ್ಯರಿಗಿಂತ ಕನಿಷ್ಠ ಐದು ಪಟ್ಟು ಸೂಕ್ಷ್ಮ ಶ್ರವಣಶಕ್ತಿ
ಬೆಕ್ಕಿನ ಕಿವಿ ತಿರುಗುವುದಷ್ಟೇ ಅಲ್ಲ, ಅದರ ಶ್ರವಣಶಕ್ತಿಯೂ ಅತ್ಯಂತ ಸೂಕ್ಷ್ಮ. ಸರಾಸರಿ ಬೆಕ್ಕಿನ ಶ್ರವಣ ಸಾಮರ್ಥ್ಯವು ವಯಸ್ಕ ಮನುಷ್ಯನಿಗಿಂತ ಕನಿಷ್ಠ ಐದು ಪಟ್ಟು ಹೆಚ್ಚು ಎಂದು ಅಧ್ಯಯನ ವರದಿಗಳು ಹೇಳುತ್ತದೆ. ಮನುಷ್ಯರಿಗೆ ಕೇಳಿಸದಷ್ಟು ಹೆಚ್ಚಿನ ಆವರ್ತನದ ಧ್ವನಿಗಳನ್ನೂ ಬೆಕ್ಕುಗಳು ಗ್ರಹಿಸಬಲ್ಲವು. ಪ್ರಕೃತಿಯಲ್ಲಿ ಇದು ಅವುಗಳಿಗೆ ಬೇಟೆಯಾಡುವಾಗ ಸಹಾಯ ಮಾಡುತ್ತಿತ್ತು. ಇಲಿಗಳು ಮತ್ತು ಕೆಲವು ಪಕ್ಷಿಗಳು ಹೊರಡಿಸುವ ಹೆಚ್ಚಿನ ಆವರ್ತನದ ಶಬ್ದಗಳನ್ನು ಗುರುತಿಸಲು ಈ ಸಾಮರ್ಥ್ಯ ಅನುಕೂಲಕರವಾಗಿದೆ. ಅದಕ್ಕೇ ಮನೆಯಲ್ಲಿರುವ ಬೆಕ್ಕು ಕೆಲವೊಮ್ಮೆ ಏನೂ ಇಲ್ಲದ ಜಾಗವನ್ನೇ ನೋಡುತ್ತಾ ಕುಳಿತಿರುವಂತೆ ಕಾಣಬಹುದು!
ಬೆಕ್ಕುಗಳು 20 ಪೌಂಡ್ವರೆಗೆ ತೂಗಬಹುದು!
ಎಲ್ಲಾ ಬೆಕ್ಕುಗಳೂ ಒಂದೇ ಗಾತ್ರದಲ್ಲಿರುವುದಿಲ್ಲ. ದೊಡ್ಡ ಗಾತ್ರದ ಸಾಕು ಬೆಕ್ಕುಗಳ ಪೈಕಿ ಸೈಬೀರಿಯನ್, ರ್ಯಾಗ್ಡಾಲ್, ಮೈನ್ ಕೂನ್ ಮತ್ತು ಬ್ರಿಟಿಷ್ ಶಾರ್ಟ್ಹೇರ್ ತಳಿಗಳು ಇವೆ. ಇಂತಹ ದೊಡ್ಡ ಗಾತ್ರದ ಬೆಕ್ಕುಗಳ ಗಂಡುಗಳ ಸರಾಸರಿ ತೂಕ ಸುಮಾರು 20 ಪೌಂಡ್, ಅಂದರೆ ಸುಮಾರು 9 ಕಿಲೋ ಗ್ರಾಂ ಆಗಿರಬಹುದು. ದಟ್ಟವಾದ ರೋಮ ಮತ್ತು ಸ್ನೇಹಪರ ಸ್ವಭಾವವೂ ಈ ದೊಡ್ಡ ತಳಿಗಳ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.
ಬೆಕ್ಕಿನ ಆಯುಷ್ಯದ ಬಹುಭಾಗ ನಿದ್ದೆಯಲ್ಲೇ!
ನಿಮ್ಮ ಬೆಕ್ಕು ದಿನವಿಡೀ ನಿದ್ದೆ ಮಾಡುತ್ತಿರುವಂತೆ ಕಾಣುತ್ತದೆಯೇ? ಅದು ನಿಮ್ಮ ಕಲ್ಪನೆಯಲ್ಲ ! ಸಾಕು ಬೆಕ್ಕುಗಳು ದಿನದ ಸುಮಾರು 70 ಪ್ರತಿಶತ ಸಮಯವನ್ನು ನಿದ್ದೆಯಲ್ಲಿ ಮತ್ತು ಸುಮಾರು 15 ಪ್ರತಿಶತ ಸಮಯವನ್ನು ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುವುದರಲ್ಲಿ ಕಳೆಯುತ್ತವೆ. ವಯಸ್ಕ ಬೆಕ್ಕುಗಳು ದಿನಕ್ಕೆ ಸುಮಾರು 16ರಿಂದ 20 ಗಂಟೆಗಳವರೆಗೆ ನಿದ್ರಿಸಬಹುದು. ಚಿಕ್ಕ ಮರಿಗಳು ಮತ್ತು ವಯಸ್ಸಾದ ಬೆಕ್ಕುಗಳು ಇನ್ನೂ ಹೆಚ್ಚಿನ ಸಮಯ ನಿದ್ದೆ ಮಾಡುವ ಸಾಧ್ಯತೆಯಿದೆ.
ಇದಕ್ಕೆ ಅವುಗಳ ಬೇಟೆಗಾರ ಸ್ವಭಾವವೂ ಒಂದು ಕಾರಣ. ಬೇಟೆಯಾಡುವ ಸಮಯದಲ್ಲಿ ಶಕ್ತಿ ಬಳಸಲು ದೇಹವು ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯುವ ರೀತಿಯಲ್ಲಿ ಅವುಗಳ ಜೀವನಶೈಲಿ ರೂಪುಗೊಂಡಿದೆ.
ಮೂಗಿನ ಕೆಳಗೆ ಏನಿದೆ ಎಂದು ಅದಕ್ಕೆ ಕಾಣುವುದಿಲ್ಲ !
ಬೆಕ್ಕಿಗೆ ಅತ್ಯುತ್ತಮ ದೃಷ್ಟಿ ಇದೆ ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಅದರ ದೃಷ್ಟಿಗೂ ಒಂದು ಮಿತಿ ಇದೆ. ಬೆಕ್ಕಿಗೆ ತನ್ನ ಮೂಗಿನ ನೇರ ಕೆಳಭಾಗವನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಅಲ್ಲಿ ಒಂದು ರೀತಿಯ blind spot ಇರುತ್ತದೆ. ಆದರೆ ಹತ್ತಿರದಲ್ಲಿರುವ ವಸ್ತುವನ್ನು ಗುರುತಿಸುವಾಗ ಬೆಕ್ಕು ದೃಷ್ಟಿಗಿಂತ ವಾಸನೆಯಂತಹ ಇತರ ಇಂದ್ರಿಯಗಳ ಮೇಲೆ ಹೆಚ್ಚು ಅವಲಂಬಿಸಬಹುದು.
ಹೆಚ್ಚಿನ ಬೆಕ್ಕುಗಳಿಗೆ ಕಣ್ಣಿನ ರೆಪ್ಪೆ ಇರುವುದಿಲ್ಲ!
ಇದು ಬಹುಶಃ ಈ ಪಟ್ಟಿಯಲ್ಲಿರುವ ಅತ್ಯಂತ ಸರಳವಾದರೂ ಕುತೂಹಲಕಾರಿ ಸಂಗತಿ. ಹೆಚ್ಚಿನ ಬೆಕ್ಕುಗಳಿಗೆ ಮನುಷ್ಯರಂತಿರುವ ಕಣ್ಣಿನ ರೆಪ್ಪೆಗಳು ಇರುವುದಿಲ್ಲ. ಬೆಕ್ಕಿನ ಕಣ್ಣುಗಳನ್ನು ಹತ್ತಿರದಿಂದ ನೋಡಿದಾಗ ಅದರ ಕಣ್ಣುಗಳ ಸುತ್ತ ಮನುಷ್ಯರ ಕಣ್ಣಿನ ರೆಪ್ಪೆಗಳಂತೆ ಕಾಣುವ ರಚನೆ ಇಲ್ಲದಿರುವುದು ಗಮನಕ್ಕೆ ಬರಬಹುದು.
ಮುಂಭಾಗದ ಪಾದಗಳಲ್ಲಿ ಐದು ಬೆರಳು, ಹಿಂಭಾಗದಲ್ಲಿ ನಾಲ್ಕು!
ಬೆಕ್ಕಿನ ಪಾದಗಳಿಗೂ ಒಂದು ವಿಶೇಷ ವಿನ್ಯಾಸವಿದೆ. ಸಾಮಾನ್ಯವಾಗಿ ಅದರ ಪ್ರತಿಯೊಂದು ಮುಂಭಾಗದ ಪಾದದಲ್ಲಿ ಐದು ಬೆರಳುಗಳು, ಹಿಂಭಾಗದ ಪ್ರತಿಯೊಂದು ಪಾದದಲ್ಲಿ ನಾಲ್ಕು ಬೆರಳುಗಳು ಇರುತ್ತವೆ. ಆದರೆ ಇದಕ್ಕೆ ಅಪವಾದಗಳೂ ಇವೆ. ಕೆಲವು ಬೆಕ್ಕುಗಳಿಗೆ ಹೆಚ್ಚುವರಿ ಬೆರಳುಗಳಿರಬಹುದು. ಇದುವರೆಗೆ ಕಾಣಸಿಕ್ಕಿದ ಅತಿ ಹೆಚ್ಚು ಬೆರಳುಗಳನ್ನು ಹೊಂದಿದ್ದ ದಾಖಲಾಗಿರುವ ಬೆಕ್ಕಿಗೆ 32 ಬೆರಳುಗಳು ಇದ್ದಕ. ಆ ಬೆಕ್ಕಿಗೆ ಪ್ರತಿ ಪಾದದಲ್ಲೂ ಎಂಟು ಬೆರಳು ಇದ್ದವು.
ಕನಸಿನಲ್ಲಿ ಬಿಳಿ ಬೆಕ್ಕು ಬಂದರೆ ಅದೃಷ್ಟವಂತೆ!
ವಿಜ್ಞಾನಕ್ಕಿಂತ ಇದು ಜನಪದ ನಂಬಿಕೆಗಳ ಜಗತ್ತಿಗೆ ಸೇರಿದ ಸಂಗತಿ. ಹಲವು ದೇಶಗಳ ಪುರಾಣಗಳು ಮತ್ತು ಜನಪದ ಕಥೆಗಳಲ್ಲಿ ಬಿಳಿ ಬೆಕ್ಕನ್ನು ಅದೃಷ್ಟದ ಸಂಕೇತವಾಗಿ ನೋಡಲಾಗಿದೆ. ಕೆಲವು ಸಂಪ್ರದಾಯಗಳಲ್ಲಿ ಅದು ಶುದ್ಧತೆ ಮತ್ತು ಸಂತೋಷದ ಪ್ರತೀಕವೆಂದೂ ನಂಬಲಾಗಿದೆ. ಹೀಗಾಗಿ ಕನಸಿನಲ್ಲಿ ಬಿಳಿ ಬೆಕ್ಕು ಕಂಡರೆ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯೂ ಕೆಲವು ಸಂಸ್ಕೃತಿಗಳಲ್ಲಿ ಕಂಡುಬರುತ್ತದೆ. ಇದು ನಂಬಿಕೆ ಮತ್ತು ಜನಪದ ಕಥೆ, ವೈಜ್ಞಾನಿಕವಾಗಿ ಸಾಬೀತಾದ ಸಂಗತಿ ಅಲ್ಲ ಎಂಬುದನ್ನು ಗಮನಿಸಬೇಕು.
‘ಮಿಯಾಂವ್’ ಮನುಷ್ಯರಿಗಾಗಿ ಬೆಳೆದ ಭಾಷೆಯೇ?
ಇದು ಬಹುಶಃ ಬೆಕ್ಕುಗಳ ಪಟ್ಟಿಯಲ್ಲಿರುವ ಅತ್ಯಂತ ಕುತೂಹಲಕಾರಿ ಸಂಗತಿ. ಬೆಕ್ಕುಗಳು ಮನುಷ್ಯರೊಂದಿಗೆ ಮಾತನಾಡುವಾಗ ಮಾಡುವ ‘ಮಿಯಾಂವ್’ ಶಬ್ದವು ಅವುಗಳ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿದೆ. ಆದರೆ ಮನುಷ್ಯರೊಂದಿಗೆ ವಾಸಿಸದ ವಯಸ್ಕ ಬೆಕ್ಕುಗಳು ಪರಸ್ಪರ ಸಂವಹನ ನಡೆಸುವಾಗ ವಾಸನೆ, ಮುಖಭಾವ, ದೇಹಭಾಷೆ ಮತ್ತು ಸ್ಪರ್ಶ ಸೇರಿದಂತೆ ಹಲವು ವಿಧಾನಗಳನ್ನು ಬಳಸುತ್ತವೆ. ಮನೆಯ ಬೆಕ್ಕುಗಳು ಮನುಷ್ಯರೊಂದಿಗೆ ತಮ್ಮ ಅಗತ್ಯಗಳನ್ನು ತಿಳಿಸಲು ‘ಮಿಯಾಂವ್’ ಮಾಡುವ ರೀತಿಯನ್ನು ಅಭಿವೃದ್ಧಿಪಡಿಸಿಕೊಂಡಿವೆ ಎಂದು ಅಧ್ಯಯನಗಳು ವಿವರಿಸುತ್ತದೆ. ಅಂದರೆ, ನಿಮ್ಮ ಬೆಕ್ಕು ನಿಮ್ಮತ್ತ ನೋಡಿ “ಮಿಯಾಂವ್” ಎಂದಾಗ ಅದು ಕೇವಲ ಶಬ್ದ ಮಾಡುತ್ತಿಲ್ಲ. ನಿಮ್ಮೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿರಬಹುದು. ಬೆಕ್ಕುಗಳನ್ನು ಮತ್ತೊಮ್ಮೆ ಗಮನಿಸಿ…
ನಮ್ಮ ಮನೆಯೊಳಗೆ ಮೌನವಾಗಿ ಓಡಾಡುವ, ಕಿಟಕಿಯ ಬಳಿ ಕುಳಿತು ಹೊರಗಿನ ಜಗತ್ತನ್ನು ನೋಡುವ ಅಥವಾ ದಿನದ ಬಹುಪಾಲು ನಿದ್ದೆ ಮಾಡುವ ಬೆಕ್ಕಿನ ಹಿಂದೆ ಇಷ್ಟೊಂದು ಕುತೂಹಲಕಾರಿ ಸಂಗತಿಗಳಿವೆ.

