ಇದು ಊರಲ್ಲ, ಒಂದು ಅನುಭವ – ಪ್ರಕೃತಿ, ಸಂಸ್ಕೃತಿ, ಇತಿಹಾಸ ಸಾಹಸದ ಸಂಗಮ!

ಮಂಜಿನ ಹಾದಿಯಲ್ಲಿ ನಿಧಾನವಾಗಿ ಸಾಗುತ್ತಾ ಹೋದರೆ ಗಾಳಿಯಲ್ಲಿ ತೇಲಿಬರುವ ಕಾಫಿಯ ಘಮ… ದೂರದಲ್ಲಿ ಕೈಬೀಸಿ ಕರೆಯುತ್ತಿದೆ ಎಂಬಂತೆ ಭಾಸವಾಗುವ ಹಸಿರು ಬೆಟ್ಟಗಳು…
ಇದು ಕೊಡಗು. ಇಲ್ಲಿ ಪ್ರತಿಯೊಂದು ಬೆಳಗ್ಗೆಯೂ ಪ್ರಕೃತಿಯ ಹೊಸ ಕಥೆಯನ್ನು ಹೇಳುತ್ತದೆ. ಕಾಡಿನ ಮೌನ, ಜಲಪಾತಗಳ ನಾದ, ಸಂಸ್ಕೃತಿಯ ಬೇರುಗಳು ಮತ್ತು ಸಾಹಸದ ಸಣ್ಣ ಥ್ರಿಲ್ ಇವೆಲ್ಲ ಸೇರಿ ಕೊಡಗು ಎನ್ನುವುದು ಒಂದು ಸಂಪೂರ್ಣ ಅನುಭವ. ಒಮ್ಮೆ ಈ ನೆಲಕ್ಕೆ ಕಾಲಿಟ್ಟರೆ, ಮರಳಿ ಹೋದರೂ ಮನಸ್ಸು ಇಲ್ಲಿಯೇ ಉಳಿದುಬಿಡುತ್ತದೆ.


ಪಶ್ಚಿಮ ಘಟ್ಟಗಳ ಮಡಿಲಲ್ಲಿ ಮಲಗಿರುವ ಕೊಡಗು, ಕೇವಲ ಪ್ರವಾಸ ಸ್ಥಳವಲ್ಲ, ಅದು ಒಂದು ಭಾವನೆ. ಬ್ರಿಟಿಷರ ಕಾಲದಲ್ಲಿ ‘ಭಾರತದ ಸ್ಕಾಟ್ಲೆಂಡ್’ ಎಂದು ಕರೆಸಿಕೊಂಡ ಈ ನಾಡು, ಇಂದಿಗೂ ತನ್ನ ಮಂಜಿನ ಬೆಟ್ಟಗಳು, ಕಾಫಿಯ ಸುವಾಸನೆ ಮತ್ತು ವಿಶಿಷ್ಟ ಜೀವನ ಶೈಲಿಯಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಆಧುನಿಕತೆ ಎಷ್ಟೇ ಬೆಳೆಯಲಿ, ಕೊಡಗಿನ ಆತ್ಮ ಇನ್ನೂ ಪ್ರಕೃತಿಯೊಂದಿಗೇ ಉಸಿರಾಡುತ್ತಿದೆ.

ಕೊಡಗು ಪರಿಚಿತವೆನಿಸಿದರೂ, ಅದರೊಳಗೆ ಅಡಗಿರುವ ಅನೇಕ ಅಚ್ಚರಿಗಳು ಇನ್ನೂ ಅಜ್ಞಾತವಾಗಿವೆ. ಕರ್ನಾಟಕದಲ್ಲಿ ಕೊಡಗು ಯಾಕೆ ವಿಶಿಷ್ಟ ಸ್ಥಾನ ಪಡೆದಿದೆ ಎಂದರೆ ಈ ಕೆಳಗಿನವುಗಳನ್ನ ಪಟ್ಟಿ ಮಾಡಬಹುದು…

ಕೊಡಗು ಕಾಫಿಯ ಹೃದಯಭೂಮಿ

ಕೊಡಗಿನ ಬೆಳಗ್ಗೆ ಎಂದರೆ ಕಾಫಿಯ ಘಮ. ಬೆಟ್ಟಗುಡ್ಡಗಳ ಮಧ್ಯೆ ಹರಡಿಕೊಂಡಿರುವ ಕಾಫಿ ತೋಟಗಳು ಇಲ್ಲಿ ಜೀವನದ ಭಾಗವೇ ಆಗಿವೆ. ಬ್ರಿಟಿಷರು ಆರಂಭಿಸಿದ ಈ ತೋಟಗಳು ಇಂದು ಭಾರತ ದೇಶಕ್ಕೆ ಅತ್ಯುತ್ತಮ ಕಾಫಿಯನ್ನು ನೀಡುತ್ತಿವೆ. ತೋಟಗಳೊಳಗೆ ನಡೆದು ಕಾಫಿಯ ಕಥೆ ಕೇಳುವುದು ಇಲ್ಲಿನ ವಿಶೇಷ ಅನುಭವ.

ಜೀವನದಿ ಕಾವೇರಿಯ ಹುಟ್ಟೂರು

ದಕ್ಷಿಣ ಭಾರತದ ಜೀವನಾಡಿ ಕಾವೇರಿ ನದಿ ಹುಟ್ಟುವುದು ಕೊಡಗಿನ ಬ್ರಹ್ಮಗಿರಿ ಬೆಟ್ಟಗಳಲ್ಲಿ. ಇಲ್ಲಿನ ತಲಕಾವೇರಿಯಲ್ಲಿ ಕಾವೇರಿ ದೇವಿಗೆ ಸಮರ್ಪಿತವಾದ ಪವಿತ್ರ ಕ್ಷೇತ್ರವಿದೆ. ಶಾಂತಿ ಮತ್ತು ಭಕ್ತಿಯ ವಾತಾವರಣ ಇಲ್ಲಿ ಮನಸ್ಸಿಗೆ ಅಪಾರ ನೆಮ್ಮದಿ ನೀಡುತ್ತದೆ.

ಶೌರ್ಯ, ಸಂಪ್ರದಾಯದ ಪ್ರತೀಕ ಇಲ್ಲಿನ ಕೊಡವರು

ಕೊಡವ ಸಮುದಾಯ ಕೊಡಗಿನ ಆತ್ಮ. ಧೈರ್ಯಶಾಲಿ ಯೋಧರಾಗಿ, ಶ್ರಮಜೀವಿ ಕೃಷಿಕರಾಗಿ ಇವರು ಇತಿಹಾಸದಲ್ಲಿ ಗುರುತಿಸಿಕೊಂಡಿದ್ದಾರೆ. “ಕೊಡವ ತಕ್ಕ್” ಎಂಬ ವಿಶಿಷ್ಟ ಭಾಷೆ, ವಿಭಿನ್ನ ಉಡುಪು ಮತ್ತು ಆತಿಥ್ಯಭಾವ ಇವರ ಗುರುತು. ಸೇನೆ ಹಾಗೂ ಕ್ರೀಡೆಯಲ್ಲಿ ಕೊಡವರ ಸಾಧನೆ ರಾಷ್ಟ್ರಮಟ್ಟದಲ್ಲೂ ಅಚ್ಚಳಿಯದಂತೆ ಹೆಸರಾಗಿದೆ.

ಕೊಡಗಿನಲ್ಲೊಂದು ವಿಶಿಷ್ಟ ತಿಬೇಟಿಯನ್ ಲೋಕ

ಕುಶಾಲನಗರದ ಸಮೀಪ ಇರುವ ಬೈಲಕುಪ್ಪೆ ಒಂದು ವಿಭಿನ್ನ ಜಗತ್ತು. ಇಲ್ಲಿ ನೆಲೆಸಿರುವ ತಿಬೇಟಿಯನ್ ಸಮುದಾಯ ತಮ್ಮ ಸಂಸ್ಕೃತಿ, ಆಹಾರ ಮತ್ತು ಧರ್ಮವನ್ನು ಉಳಿಸಿಕೊಂಡಿದೆ. ಗೋಲ್ಡನ್ ಟೆಂಪಲ್‌ನ ಶಾಂತ ವಾತಾವರಣ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಪುಟಾಣಿ ಟಿಬೆಟ್ ನ ನಾವು ಇಲ್ಲಿ ಕಾಣಬಹುದು.

ಜೇನಿನ ಸಿಹಿಗೆ ಹೆಸರಾದ ವಿರಾಜಪೇಟೆ

ಕೊಡಗಿನ ಪ್ರಮುಖ ಪಟ್ಟಣ ವಿರಾಜಪೇಟೆ ಜೇನು ಉತ್ಪಾದನೆಗೆ ಪ್ರಸಿದ್ಧ. ಇಲ್ಲಿನ ಜೇನು ತನ್ನ ಸ್ವಚ್ಛತೆ ಮತ್ತು ಸಿಹಿಯಿಂದ ಏಷ್ಯಾದಲ್ಲೇ ಹೆಸರು ಮಾಡಿದೆ. ಜೊತೆಗೆ ಕಾಫಿ, ಮೆಣಸು, ಏಲಕ್ಕಿ ಮುಂತಾದ ಬೆಳೆಗಳು ಇಲ್ಲಿನ ಕೃಷಿಯ ಹೆಮ್ಮೆ. ಇತಿಹಾಸ ಪ್ರಿಯರಿಗೆ 240 ವರ್ಷ ಹಳೆಯ ಸೈಂಟ್ ಆ್ಯನ್ನ್ಸ್ ಚರ್ಚ್ ವಿಶೇಷ ಆಕರ್ಷಣೆ.

ಪೌರಾಣಿಕ ಕಥೆಯೊಳಗಿನ ಓಂಕಾರೇಶ್ವರ

ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನಕ್ಕೆ ವಿಶಿಷ್ಟ ಪೌರಾಣಿಕ ಹಿನ್ನೆಲೆ ಇದೆ. ಕಾಶಿಯಿಂದ ತರಿಸಲಾದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಈ ದೇವಸ್ಥಾನಕ್ಕೆ ವಿಭಿನ್ನ ಸೊಬಗನ್ನು ನೀಡಿದೆ. ಸರೋವರದ ಮಧ್ಯೆ ಇರುವ ಈ ದೇವಾಲಯ ಮನಸ್ಸಿಗೆ ಅಸಾಧಾರಣ ನೆಮ್ಮದಿ ನೀಡುತ್ತದೆ.

ಮೋಡಗಳನ್ನು ಮುಟ್ಟುವ ತಾಡಿಯಂಡಮೋಳ

ಕೊಡಗಿನ ಅತಿ ಎತ್ತರದ ಶಿಖರ ತಾಡಿಯಂಡಮೋಳ ಸಾಹಸಪ್ರಿಯರ ನೆಚ್ಚಿನ ತಾಣ. ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವ ಟ್ರೆಕ್ಕಿಂಗ್ ಮಾರ್ಗಗಳು ಪ್ರಕೃತಿಯ ಅಚ್ಚರಿ ಸೌಂದರ್ಯವನ್ನು ಪರಿಚಯಿಸುತ್ತವೆ. ಇದರ ತಳಭಾಗದಲ್ಲಿರುವ ನಲಕನಾಡು ಅರಮನೆ ಕೊಡಗಿನ ರಾಜಕೀಯ ಇತಿಹಾಸವನ್ನು ನೆನಪಿಸುತ್ತದೆ.

ಕಾಡಿನೊಳಗಿನ ಜೀವಂತ ಲೋಕ

ಕೊಡಗು ಅದೆಷ್ಟೋ ವನ್ಯಜೀವಿಗಳಿಗೂ ಮನೆ. ನಾಗರಹೊಳೆ, ಪುಷ್ಪಗಿರಿ ಮತ್ತು ಬ್ರಹ್ಮಗಿರಿ ವನ್ಯಧಾಮಗಳು ಜೀವ ವೈವಿಧ್ಯತೆಯ ಜೀವಂತ ಉದಾಹರಣೆಗಳು. ದುಬಾರೆ ಆನೆ ಶಿಬಿರದಲ್ಲಂತೂ ಆನೆಗಳೊಂದಿಗೆ ಸಮಯ ಕಳೆಯುವುದು ಮಕ್ಕಳಿಗೂ ದೊಡ್ಡವರಿಗೂ ಮಧುರ ಅನುಭವ.

ನದಿಯ ಅಲೆಗಳೊಂದಿಗೆ ಸಾಹಸ

ಬರಪೋಲೆ ನದಿ ಸಾಹಸ ಪ್ರಿಯರಿಗೆ ಕರೆಯುತ್ತಿದೆ. ಮಳೆಗಾಲದಲ್ಲಿ ಈ ನದಿಯಲ್ಲಿ ನಡೆಯುವ ರಿವರ್ ರಾಫ್ಟಿಂಗ್ ಹೃದಯ ಬಡಿತ ಹೆಚ್ಚಿಸುವ ಅನುಭವ. ನದಿಯ ತೀರದಲ್ಲಿ ಕ್ಯಾಂಪಿಂಗ್ ಕೂಡ ಪ್ರವಾಸವನ್ನು ಮತ್ತಷ್ಟು ರೋಚಕಗೊಳಿಸುತ್ತದೆ.

ಧೈರ್ಯ ಪರೀಕ್ಷೆಗೆ ಇಲ್ಲಿದೆ ಜಲಪಾತ!

ಕೊಡಗು ಎಂದರೆ ಜಲಪಾತಗಳ ನಾಡು. ಅಬ್ಬಿ, ಇರುಪ್ಪು, ಮಲ್ಲಳ್ಳಿ, ಕಬ್ಬೆ ಮತ್ತು ಕರಿಕೆ ಜಲಪಾತಗಳು ಕಣ್ಣಿಗೆ ಹಬ್ಬ. ವಿರಾಜಪೇಟೆ ಸಮೀಪದ ಚೆಲವರ ಜಲಪಾತ ವಾಟರ್ ರ್ಯಾಪೆಲಿಂಗ್‌ಗೆ ಪ್ರಸಿದ್ಧವಾಗಿದ್ದು ಸಾಹಸ ಪ್ರಿಯರಿಗೆ ವಿಶೇಷ ಆಕರ್ಷಣೆ.

ಕೊಡಗು ಎನ್ನುವುದು ಒಂದು ಸ್ಥಳವಲ್ಲ, ಅದು ಅನುಭವ. ಪ್ರಕೃತಿ, ಸಂಸ್ಕೃತಿ, ಇತಿಹಾಸ ಮತ್ತು ಸಾಹಸದ ಸಮ್ಮಿಶ್ರಣ. ಒಮ್ಮೆ ಈ ಮಂಜಿನ ನಾಡಿಗೆ ಕಾಲಿಟ್ಟರೆ ಸಾಕು, ಅದರ ನೆನಪುಗಳು ಜೀವನ ಪೂರ್ತಿ ನಮ್ಮ ಜೊತೆ ಶಾಶ್ವತವಾಗಿ ಉಳಿದುಹೋಗುತ್ತದೆ.

Going Outside for the First Time in Months to Enjoy the Cool Air

By impossible of in difficulty discovered celebrated ye. Justice joy manners boy met resolve...

Having Fun at an Outdoor Pool that an Uncle Owns

By impossible of in difficulty discovered celebrated ye. Justice joy manners boy met resolve...

Singing Happy Birthday to Yourself Because You Deserve It

By impossible of in difficulty discovered celebrated ye. Justice joy manners boy met resolve...

- A word from our sponsor -

spot_img

LEAVE A REPLY

Please enter your comment!
Please enter your name here