Latest Posts

ದೇಶದಲ್ಲಿ LPG, ಪೆಟ್ರೋಲ್-ಡೀಸೆಲ್ ಪೂರೈಕೆ ಸುಗಮ: ಕೇಂದ್ರ ಸರ್ಕಾರ ಭರವಸೆ

ನವದೆಹಲಿ: ದೇಶದಲ್ಲಿ ಅಡುಗೆ ಅನಿಲ ಹಾಗೂ ಪೆಟ್ರೋಲ್, ಡೀಸೆಲ್ ಪೂರೈಕೆ ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ಕೆಲ ಮಟ್ಟಿನ ಅಡಚಣೆ ಉಂಟಾದರೂ, ಗ್ರಾಹಕರಿಗೆ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಅಂತರ್ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಮಾತನಾಡಿ, ಗೃಹ ಬಳಕೆಯ LPG ಸಿಲೆಂಡರ್‌ಗಳನ್ನು ಶೇಕಡಾ 100ರಷ್ಟು ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ ಎಂದರು. ವಾಣಿಜ್ಯ ಬಳಕೆಯ ಅನಿಲ ಸಿಲೆಂಡರ್ ಪೂರೈಕೆ ಶೇಕಡಾ 70ರಷ್ಟಿದ್ದು, ಹಂತ ಹಂತವಾಗಿ ಸರಬರಾಜು ಸ್ಥಿರಗೊಳಿಸಲಾಗುತ್ತಿದೆ ಎಂದು ಹೇಳಿದರು.

ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರ ಏರಿಕೆಯಾಗಿದ್ದರೂ, ಗೃಹ ಬಳಕೆಯ LPG, ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವುದೇ ಏರಿಕೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 5 ಕೆಜಿ LPG ಸಿಲೆಂಡರ್‌ಗಳ ಬೇಡಿಕೆ ಹೆಚ್ಚಿದ್ದು, ಒಂದೇ ದಿನದಲ್ಲಿ ಸುಮಾರು 1.20 ಲಕ್ಷ ಸಿಲೆಂಡರ್‌ಗಳು ಮಾರಾಟವಾಗಿವೆ ಎಂದು ಮಾಹಿತಿ ನೀಡಿದರು.

ಇದರೊಂದಿಗೆ ದೇಶಾದ್ಯಂತ ಹೊಸದಾಗಿ 6.31 ಲಕ್ಷ ಪೈಪ್ ಮೂಲಕ ನೈಸರ್ಗಿಕ ಅನಿಲ (PNG) ಸಂಪರ್ಕಗಳನ್ನು ಒದಗಿಸಲಾಗಿದೆ. ಈಗಾಗಲೇ 6 ಲಕ್ಷಕ್ಕೂ ಅಧಿಕ ಗ್ರಾಹಕರು ಈ ಸೇವೆಗೆ ನೋಂದಾಯಿಸಿಕೊಂಡಿದ್ದು, ಸುಮಾರು 49 ಸಾವಿರಕ್ಕೂ ಹೆಚ್ಚು ಗ್ರಾಹಕರು LPG ಸಂಪರ್ಕವನ್ನು ಸ್ವಯಂ ತ್ಯಜಿಸಿದ್ದಾರೆ ಎಂದು ಹೇಳಿದರು.

ದೇಶದ ಕಚ್ಚಾ ತೈಲ ಶುದ್ಧೀಕರಣ ಘಟಕಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂಧನ ಸರಬರಾಜಿನಲ್ಲಿ ಯಾವುದೇ ದೊಡ್ಡ ವ್ಯತ್ಯಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶಕ ಒಪೇಶ್ ಕುಮಾರ್ ಶರ್ಮಾ ಮಾಹಿತಿ ನೀಡಿ, ಕೊಲ್ಲಿ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ಹಡಗು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದರು. ಈಗಾಗಲೇ ಸುಮಾರು 3 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ. ದೇಶದ ಬಂದರು ಕಾರ್ಯಾಚರಣೆಗಳೂ ಸಾಮಾನ್ಯ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.

Latest Posts

spot_imgspot_img

Fashion Week