ನವದೆಹಲಿ: ಭಾರತ ಮತ್ತು Vietnam ನಡುವಿನ ಆರ್ಥಿಕ ಮತ್ತು ತಂತ್ರಾತ್ಮಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 2030ರ ವೇಳೆಗೆ 25 ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟು ಗುರಿ ಸಾಧಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ.
ಪ್ರಧಾನಿ Narendra Modi ಮತ್ತು ವಿಯಟ್ನಾಂ ಅಧ್ಯಕ್ಷ Tô Lâm ನಡುವೆ ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪೂರ್ವ ವಲಯದ ಕಾರ್ಯದರ್ಶಿ ಕುಮಾರನ್ ಮಾಹಿತಿ ನೀಡಿ, ಸಾಂಸ್ಕೃತಿಕ ಸಹಕಾರ, ಹಣಕಾಸು, ಆವಿಷ್ಕಾರ, ವಿರಳ ಖನಿಜಗಳು, ಔಷಧ ಮತ್ತು ಶಿಕ್ಷಣ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ವಿಯಟ್ನಾಂನ ಕೇಂದ್ರೀಯ ಬ್ಯಾಂಕ್ ನಡುವಿನ ಸಹಭಾಗಿತ್ವ ಫಿನ್‌ಟೆಕ್ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ತಿಳಿಸಲಾಗಿದೆ. ಈ ಒಪ್ಪಂದದಿಂದ ಗುಣಮಟ್ಟದ ಭಾರತೀಯ ಔಷಧಗಳು ವಿಯಟ್ನಾಂನಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ರಕ್ಷಣಾ ಸಹಕಾರ ಮತ್ತು ರಕ್ಷಣಾ ಕೈಗಾರಿಕಾ ಕ್ಷೇತ್ರದಲ್ಲಿನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವುದಕ್ಕೂ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ವಿಯಟ್ನಾಂ ನೀಡಿರುವ ಬೆಂಬಲವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡಿದ್ದು, ಪಹಲ್ಗಾಮ್ ದಾಳಿಯ ಬಳಿಕ ವ್ಯಕ್ತಪಡಿಸಿದ ಬೆಂಬಲಕ್ಕಾಗಿ ವಿಯಟ್ನಾಂ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ್ದಾರೆ.
ಇದಲ್ಲದೆ, ವಿಯಟ್ನಾಂ ಇಂಡೋ-ಫೆಸಿಫಿಕ್ ಸಾಗರ ಉಪಕ್ರಮ (IPOI) ಗೆ ಸೇರ್ಪಡೆಯಾಗಿರುವುದೂ ದ್ವಿಪಕ್ಷೀಯ ಬಾಂಧವ್ಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ವಿಯಟ್ನಾಂ ಅಧ್ಯಕ್ಷ ತೋ ಲಾಮ್ ನಾಳೆ Mumbaiಗೆ ಭೇಟಿ ನೀಡಲಿದ್ದು, ವಿಯಟ್ನಾಂ-ಭಾರತ ವಾಣಿಜ್ಯ ಒಕ್ಕೂಟದಡಿ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.



