ಕಲಬುರಗಿ: ಕಲಬುರಗಿ ಜಿಲ್ಲೆ ಎಂದರೆ ಬಿಸಿಲು ಮತ್ತು ಬರದ ನಾಡು ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಆದರೆ ಜಿಲ್ಲೆಯ ಜೇವರ್ಗಿ ತಾಲೂಕಿನ ಯಳವಾರ ಗ್ರಾಮದ ಯುವ ರೈತ ವಿಜಯಕುಮಾರ್ ಪಾಟೀಲ್, ಬಿರು ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಬಿಸಿಲಿನ ನಡುವೆ ಕೃಷಿಯಲ್ಲಿ ಹೊಸ ಪ್ರಯೋಗ
ರಾಜ್ಯದ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಜಿಲ್ಲೆಗಳಲ್ಲಿ ಕಲಬುರಗಿ ಒಂದಾಗಿದೆ. ಬೇಸಿಗೆ ವೇಳೆಯಲ್ಲಿ ಬಹುತೇಕ ರೈತರು ಕೃಷಿಯಿಂದ ದೂರವಿರುವಾಗ ವಿಜಯಕುಮಾರ್ ಪಾಟೀಲ್ ಹೊಸ ಪ್ರಯೋಗಕ್ಕೆ ಕೈಹಾಕಿ ಯಶಸ್ಸು ಕಂಡಿದ್ದಾರೆ.
ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಆರಂಭದಲ್ಲಿ ಗುತ್ತಿಗೆದಾರರಾಗಿ ಜೀವನ ಆರಂಭಿಸಿದ್ದರು. ಬಳಿಕ ಕುಟುಂಬದ ಕೃಷಿ ಪರಂಪರೆ ಮುಂದುವರಿಸಲು ಕೃಷಿಯತ್ತ ಮುಖ ಮಾಡಿದರು.
ಪ್ರತಿ ಎಕರೆಗೆ 3 ರಿಂದ 4 ಕ್ವಿಂಟಲ್ ಎಳ್ಳು
ಮಳೆಗಾಲದಲ್ಲಿ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಅವರು, ಬೇಸಿಗೆಯಲ್ಲಿ ಪ್ರತಿ ಎಕರೆಗೆ 3 ರಿಂದ 4 ಕ್ವಿಂಟಲ್‌ವರೆಗೆ ಎಳ್ಳು ಉತ್ಪಾದನೆ ಮಾಡಿ ಗಮನ ಸೆಳೆದಿದ್ದಾರೆ.
ಆರಂಭದಲ್ಲಿ 10 ಎಕರೆ ಪ್ರದೇಶದಲ್ಲಿ 42 ಕ್ವಿಂಟಲ್ ಎಳ್ಳು ಬೆಳೆದಿದ್ದು, ಉತ್ತಮ ಲಾಭ ಗಳಿಸಿದ್ದೇನೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.
ಬೀಜ ಸರಬರಾಜು, ರೈತರಿಗೆ ತರಬೇತಿ
ಕೇವಲ ಬೆಳೆ ಬೆಳೆಸುವುದಲ್ಲದೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳ ರೈತರಿಗೆ ಸರಬರಾಜು ಮಾಡುತ್ತಿದ್ದಾರೆ.
ಇದರ ಜೊತೆಗೆ ರೈತರಿಗೆ ಎಳ್ಳು ಬೆಳೆಯುವ ವಿಧಾನ, ನೀರಿನ ಸಮರ್ಪಕ ಬಳಕೆ, ಬೀಜದ ಆಯ್ಕೆ, ರೋಗ ನಿರ್ವಹಣೆ ಹಾಗೂ ಮಾರುಕಟ್ಟೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಪ್ರಶಸ್ತಿ ಪಡೆದ ಸಾಧನೆ
ವಿಜಯಕುಮಾರ್ ಪಾಟೀಲ್ ಅವರ ಸಾಧನೆಯನ್ನು ಗುರುತಿಸಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಶ್ರೇಷ್ಠ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ.
ಕೃಷಿಯ ಜೊತೆ ಮೀನು ಸಾಕಾಣಿಕೆ
ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಅವರು, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2 ಎಕರೆ ಪ್ರದೇಶದಲ್ಲಿ ಮೀನಿನ ಹೊಂಡ ನಿರ್ಮಿಸಿ ಕೃಷಿಯೊಂದಿಗೆ ಮೀನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.
ಯುವಕರಿಗೆ ಸ್ಪೂರ್ತಿ
ಯುವಕರು ಕೃಷಿಯಿಂದ ದೂರ ಸರಿಯುತ್ತಿರುವ ಕಾಲದಲ್ಲಿ ವಿದ್ಯಾವಂತ ಯುವ ರೈತ ವಿಜಯಕುಮಾರ್ ಪಾಟೀಲ್ ಕೃಷಿಯಲ್ಲೇ ಯಶಸ್ಸು ಕಂಡು ಇತರರಿಗೆ ಪ್ರೇರಣೆಯಾಗಿದ್ದಾರೆ.



