ವಾಷಿಂಗ್ಟನ್: ನಾಸಾದ ‘ಸೈಕಿ’ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಅಪರೂಪದ ಅರ್ಧಚಂದ್ರಾಕಾರದ ಚಿತ್ರವನ್ನು ಸೆರೆಹಿಡಿದಿದ್ದು, ಈ ಚಿತ್ರ ಇದೀಗ ವಿಜ್ಞಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಾಹ್ಯಾಕಾಶದ ಆಳದಿಂದ ಸೆರೆಹಿಡಿದ ಈ ದೃಶ್ಯದಲ್ಲಿ ಮಂಗಳ ಗ್ರಹವು ಕತ್ತಲೆಯ ನಡುವೆ ಹೊಳೆಯುವ ತೆಳ್ಳನೆಯ ಚಂದ್ರದಂತೆ ಕಾಣುತ್ತಿದೆ.
ಮೇ 3ರಂದು ಸುಮಾರು 48 ಲಕ್ಷ ಕಿಲೋಮೀಟರ್ ದೂರದಿಂದ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಸಾಮಾನ್ಯವಾಗಿ ಭೂಮಿಯಿಂದ ಕಾಣದ ಕೋನದಲ್ಲಿ ಮಂಗಳ ಗ್ರಹವನ್ನು ಚಿತ್ರಿಸಿರುವುದರಿಂದ ಇದು ವಿಶೇಷ ಮಹತ್ವ ಪಡೆದಿದೆ.
ನಾಸಾದ ‘ಸೈಕಿ’ ಮಿಷನ್ ಮೇ 15ರಂದು ಮಂಗಳ ಗ್ರಹದ ಸಮೀಪದಿಂದ ವೇಗವಾಗಿ ಹಾದುಹೋಗಲಿದೆ. ಈ ಫ್ಲೈಬೈ ವೇಳೆ ಮಂಗಳ ಗ್ರಹದ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆ ತನ್ನ ವೇಗ ಮತ್ತು ದಿಕ್ಕನ್ನು ಬದಲಿಸಿಕೊಳ್ಳಲಿದೆ. ಈ ತಂತ್ರವನ್ನು ‘ಗ್ರಾವಿಟಿ ಅಸಿಸ್ಟ್’ ಅಥವಾ ‘ಸ್ಲಿಂಗ್‌ಶಾಟ್’ ಎಂದು ಕರೆಯಲಾಗುತ್ತದೆ.
ಸುಮಾರು 19,800 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿರುವ ಸೈಕಿ ನೌಕೆ, ಮಂಗಳ ಗ್ರಹದ ಮೇಲ್ಮೈಯಿಂದ ಕೇವಲ 4,500 ಕಿಲೋಮೀಟರ್ ದೂರದಲ್ಲಿ ಹಾದು ಹೋಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಮಿಷನ್‌ನ ಅಂತಿಮ ಗುರಿ ‘16 Psyche’ ಎಂಬ ಲೋಹ ಸಮೃದ್ಧ ಗ್ರಹಶಕಲವನ್ನು ಅಧ್ಯಯನ ಮಾಡುವುದಾಗಿದೆ. ಮಂಗಳ ಗ್ರಹದ ನೆರವಿನಿಂದ ವೇಗ ಹೆಚ್ಚಿಸಿಕೊಂಡು ನೌಕೆ 2029ರಲ್ಲಿ ತನ್ನ ಗುರಿ ತಲುಪುವ ನಿರೀಕ್ಷೆಯಿದೆ.



