Latest Posts

ರೇಷ್ಮೆ ತ್ಯಾಜ್ಯವೇ ಆದಾಯದ ಮೂಲ: ಸಾವಯವ ಗೊಬ್ಬರ ತಯಾರಿಸಿ ಯಶಸ್ಸು ಕಂಡ ಕೋಲಾರದ ಯುವ ರೈತ

ಕೋಲಾರ: ರೇಷ್ಮೆ ನಗರಿ ಎಂದೇ ಪ್ರಸಿದ್ಧವಾಗಿರುವ ಕೋಲಾರ ಜಿಲ್ಲೆಯಲ್ಲಿ ಯುವ ರೈತರೊಬ್ಬರು ರೇಷ್ಮೆ ತ್ಯಾಜ್ಯವನ್ನು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಿ ಹೊಸ ಮಾದರಿ ನಿರ್ಮಿಸಿದ್ದಾರೆ. ರೇಷ್ಮೆ ಕೃಷಿಯಲ್ಲೇ ಸಾವಯವ ವಿಧಾನ ಅಳವಡಿಸಿಕೊಂಡಿರುವ ಈ ರೈತನ ಯಶೋಗಾಥೆ ಇದೀಗ ಇತರ ರೈತರಿಗೂ ಪ್ರೇರಣೆಯಾಗುತ್ತಿದೆ.

ಕೋಲಾರ ಜಿಲ್ಲೆಯ ಚಿಟ್ನಹಳ್ಳಿ ಗ್ರಾಮದ ಪ್ರಗತಿಪರ ರೈತ ನಾಗರಾಜ್ ತಮ್ಮ ಸೀಮಿತ ಕೃಷಿ ಭೂಮಿಯಲ್ಲೇ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ರೇಷ್ಮೆ ಗೂಡಿನ ಉತ್ಪಾದನೆಯಿಂದ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಸ್ವದೇಶಿ ರೇಷ್ಮೆ ತಳಿ ಅಭಿವೃದ್ಧಿಯಲ್ಲೂ ಸಾಧನೆ ಮಾಡಿದ್ದಾರೆ.

ರೇಷ್ಮೆ ಉತ್ಪಾದನೆಯ ವೇಳೆ ಹೊರಬರುವ ತ್ಯಾಜ್ಯಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು. ಅನೇಕ ರೈತರು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯುವುದು ಅಥವಾ ಹಿಪ್ಪುನೇರಳೆ ಕಡ್ಡಿಗಳನ್ನು ಸುಡುವುದು ಸಾಮಾನ್ಯವಾಗಿತ್ತು. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೈತ ನಾಗರಾಜ್, ರೇಷ್ಮೆ ತ್ಯಾಜ್ಯವನ್ನು ಸಂಸ್ಕರಿಸಿ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ಹೊಸ ವಿಧಾನ ಅಳವಡಿಸಿಕೊಂಡಿದ್ದಾರೆ. ಹಿಪ್ಪುನೇರಳೆ ಕಡ್ಡಿಗಳನ್ನು ಸಣ್ಣ ತುಂಡುಗಳಾಗಿ ಮಾಡಿ, ಅದರ ಮೇಲೆ ರೇಷ್ಮೆ ಹುಳು ಮತ್ತು ಎಲೆಗಳ ತ್ಯಾಜ್ಯವನ್ನು ಪದರವಾಗಿ ಹಾಕಿ, ಸಗಣಿ ನೀರು ಚಿಮುಕಿಸುವ ಮೂಲಕ ಗೊಬ್ಬರ ತಯಾರಿಸಲಾಗುತ್ತದೆ. ಇದು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಇದರ ಜೊತೆಗೆ ಎರೆಹುಳು ಗೊಬ್ಬರ, ಜೀವಾಮೃತ ಹಾಗೂ ಎರೆಹುಳು ಜಲ ಉತ್ಪಾದನೆಗೂ ಅವರು ಮುಂದಾಗಿದ್ದಾರೆ. ‘ಸುರಭಿ ಜೀವ ಸುಧಾ’ ಘಟಕವನ್ನು ಸ್ಥಾಪಿಸಿ ಸಾವಯವ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಿದ್ದಾರೆ.

ರೈತ ನಾಗರಾಜ್ ಮಾತನಾಡಿ, 2018ರಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದು, ಕೃಷಿ ವಿಜ್ಞಾನ ಕೇಂದ್ರ ಹಾಗೂ ರೇಷ್ಮೆ ಇಲಾಖೆಯ ಮಾರ್ಗದರ್ಶನದಲ್ಲಿ ಜೈವಿಕ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆಫ್ರಿಕನ್ ತಳಿಯ ಎರೆಹುಳುಗಳ ಬಳಕೆಯಿಂದ ಗೊಬ್ಬರದ ಫಲವತ್ತತೆ ಹೆಚ್ಚುತ್ತದೆ ಎಂದರು.

ನಾಗರಾಜ್ ಪುತ್ರ ಅಭಿಜಿತ್ ಮಾತನಾಡಿ, ತಮ್ಮ ಕೃಷಿ ವಿಧಾನ ತಿಳಿದುಕೊಳ್ಳಲು ಅನೇಕ ರೈತರು ಭೇಟಿ ನೀಡುತ್ತಿದ್ದಾರೆ. ಹಲವರು ಈಗಾಗಲೇ ಸಾವಯವ ಕೃಷಿಗೆ ಪರಿವರ್ತನೆಗೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ರೈತರಲ್ಲಿ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭೂಮಿಯ ಫಲವತ್ತತೆಯನ್ನು ಕಾಪಾಡಲು ಜೈವಿಕ ಗೊಬ್ಬರ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೇಷ್ಮೆ ತ್ಯಾಜ್ಯವನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿರುವ ರೈತ ನಾಗರಾಜ್ ಇದೀಗ ರಾಜ್ಯದ ಇತರ ರೈತರಿಗೆ ಮಾದರಿಯಾಗಿದ್ದಾರೆ.

Latest Posts

spot_imgspot_img