ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಏರಿಕೆಯ ಬರೆ ಹಾಕಿದೆ. ಹೌದು, ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳವಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಬೆಲೆ ಏರಿಕೆ ಆಗಲಿದೆ.
ಟಿಕೆಟ್ ದರ ಪರಿಷ್ಕರಣೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳುವಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಅಂದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲೂಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿಗೆ ಅವಕಾಶ ನೀಡಲಾಗಿತ್ತು. ಇದೀಗ ನಿರ್ಧಾರದಂತೆ ಕೆಎಸ್‌ಆರ್‌ಟಿಸಿಯಲ್ಲಿ ಒಂಬತ್ತು ರೂಪಾಯಿ ಟಿಕೆಟ್ ದರ ಏರಿಕೆ ಆಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಅತ್ಯಂತ ಬೃಹತ್ ಸಾರಿಗೆ ಜಾಲ ಇರುವುದು ನಮ್ಮಲ್ಲೇ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಟ್ಟು 26,125 ಬಸ್‌ಗಳು ರಸ್ತೆಗೆ ಇಳಿಯುತ್ತಿದ್ದು, ಇದು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಬರೋಬ್ಬರಿ 1,03,646 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 24,179 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ದಿನಂಪ್ರತಿ ಬರೋಬ್ಬರಿ 1.24 ಕೋಟಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ ಎಂದಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಹೆಂಗಸರಿಗೆ ಫ್ರೀ ಬಸ್ ನೀಡಿ ಗಂಡಸರಿಂದ ಹೆಚ್ಚು ಹಣ ಕಿತ್ತುಕೊಳ್ತಿದ್ದೇವೆ ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ ಇದೆಲ್ಲ ಸುಳ್ಳು.ನಿಗಮಗಳು ಯಾವುದೇ ಯೋಜನೆಯನ್ನು ಸ್ವಂತ ವೆಚ್ಚದಲ್ಲಿ ಉಚಿತವಾಗಿ ನೀಡುತ್ತಿಲ್ಲ. ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸುವ ಪೂರ್ಣಮಟ್ಟದ ಮೊತ್ತವನ್ನು ರಾಜ್ಯ ಸರ್ಕಾರವೇ ಕಾಲಕಾಲಕ್ಕೆ ನಿಗಮಗಳಿಗೆ ನೇರವಾಗಿ ಭರಿಸಿ ಹಣ ಬಿಡುಗಡೆ ಮಾಡುತ್ತಿದೆ ಎಂದಿದ್ದಾರೆ. ಡಿಸೇಲ್ ಹಣ ದುಬಾರಿಗೆ ಆಗಿದೆ. ಈ ಕಾರಣದಿಂದಾಗಿ ದರ ಏರಿಕೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.


