HomeINDIAದೇಶದಲ್ಲಿ ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಪೂರೈಕೆ ಸುಗಮ: ಕೇಂದ್ರ ಸರ್ಕಾರ ಭರವಸೆ

ದೇಶದಲ್ಲಿ ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಪೂರೈಕೆ ಸುಗಮ: ಕೇಂದ್ರ ಸರ್ಕಾರ ಭರವಸೆ

-

spot_img

ನವದೆಹಲಿ: ದೇಶದಲ್ಲಿ ಅಡುಗೆ ಅನಿಲ ಹಾಗೂ ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಆಮದು ಪ್ರಕ್ರಿಯೆಯಲ್ಲಿ ಅಡಚಣೆ ಎದುರಾದರೂ, ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಅಂತರ್ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಮಾತನಾಡಿ, ಗೃಹ ಬಳಕೆಯ ಅಡುಗೆ ಅನಿಲವನ್ನು ಶೇಕಡಾ 100ರಷ್ಟು ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ ಎಂದು ಹೇಳಿದರು. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲೆಂಡರ್ ಪೂರೈಕೆ ಸುಮಾರು ಶೇಕಡಾ 70ರಷ್ಟಿದ್ದು, ಅದರ ಲಭ್ಯತೆ ಹಂತ ಹಂತವಾಗಿ ಸುಧಾರಿಸಲಾಗುತ್ತಿದೆ ಎಂದರು.

ವಾಣಿಜ್ಯ ಅಡುಗೆ ಅನಿಲದ ದರದಲ್ಲಿ ಏರಿಕೆ ಕಂಡುಬಂದಿದ್ದರೂ, ಗೃಹ ಬಳಕೆಯ ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇತ್ತೀಚೆಗೆ 5 ಕೆಜಿ ಎಲ್‌ಪಿಜಿ ಸಿಲೆಂಡರ್‌ಗಳ ಬೇಡಿಕೆ ಹೆಚ್ಚಿದ್ದು, ಒಂದೇ ದಿನದಲ್ಲಿ ಸುಮಾರು 1.2 ಲಕ್ಷ ಸಿಲೆಂಡರ್‌ಗಳು ಮಾರಾಟವಾಗಿವೆ ಎಂದು ಮಾಹಿತಿ ನೀಡಿದರು.

ಇನ್ನೊಂದೆಡೆ, ದೇಶದಲ್ಲಿ ಪೈಪ್ ಮೂಲಕ ನೈಸರ್ಗಿಕ ಅನಿಲ (PNG) ಸಂಪರ್ಕಗಳನ್ನು ವಿಸ್ತರಿಸುವ ಕೆಲಸ ನಡೆಯುತ್ತಿದ್ದು, ಇದರಿಂದ ಗೃಹ ಮತ್ತು ವಾಣಿಜ್ಯ ಬಳಕೆದಾರರಿಗೆ ಪರ್ಯಾಯ ವ್ಯವಸ್ಥೆ ಒದಗಿಸಲಾಗುತ್ತಿದೆ. ದೇಶದ ಕಚ್ಚಾ ತೈಲ ಶುದ್ಧೀಕರಣ ಘಟಕಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನೂ ಅಧಿಕಾರಿಗಳು ತಿಳಿಸಿದ್ದಾರೆ.

ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶಕ ಒಪೇಶ್ ಕುಮಾರ್ ಶರ್ಮಾ ಮಾಹಿತಿ ನೀಡಿ, ಕೊಲ್ಲಿ ಪ್ರದೇಶದಲ್ಲಿರುವ ಭಾರತೀಯ ಹಡಗು ಸಿಬ್ಬಂದಿ ಎಲ್ಲರೂ ಸುರಕ್ಷಿತರಾಗಿದ್ದು, ಸುಮಾರು 3 ಸಾವಿರ ಮಂದಿಯನ್ನು ಈಗಾಗಲೇ ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ ಎಂದರು. ದೇಶದ ಬಂದರುಗಳ ಕಾರ್ಯಾಚರಣೆಗಳೂ ಸಾಮಾನ್ಯ ಸ್ಥಿತಿಯಲ್ಲಿವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

- Advertisment -spot_img