ಮೈಸೂರು: ಗರಿಗರಿಯಾದ ದೋಸೆ, ಒಳಗೆ ಬಿಸಿ ಬಿಸಿ ಆಲೂಗಡ್ಡೆ ಪಲ್ಯ, ಜೊತೆಗೆ ಕಾಯಿಚಟ್ನಿ ಮತ್ತು ಸಾಂಬಾರ್… ಈ ರುಚಿಯ ಮಂತ್ರ ಈಗ ವಿಶ್ವವನ್ನೇ ಸೆಳೆದಿದೆ!
ದಕ್ಷಿಣ ಭಾರತದ ಹೆಮ್ಮೆಯ ಮೈಸೂರು ಮಸಾಲೆ ದೋಸೆ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಗೌರವ ಪಡೆದಿದ್ದು, ಖ್ಯಾತ ಅಂತರರಾಷ್ಟ್ರೀಯ ಆಹಾರ ಮಾರ್ಗದರ್ಶಿ “TasteAtlas” ಪ್ರಕಟಿಸಿರುವ ವಿಶ್ವದ ಟಾಪ್ 50 ಖಾದ್ಯಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. ವಿಶ್ವದ ವಿವಿಧ ದೇಶಗಳ ಆಹಾರ ಪ್ರಿಯರು ಮತ್ತು ಫುಡ್ ಕ್ರಿಟಿಕ್ಸ್ ನೀಡಿದ ರೇಟಿಂಗ್ ಆಧಾರವಾಗಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮೈಸೂರು ಮಸಾಲೆ ದೋಸೆಗೆ 4.3 ರೇಟಿಂಗ್ ಲಭಿಸಿದೆ.
ಮಸಾಲೆ ದೋಸೆಯ ಗರಿಗರಿಯಾದ ವಿನ್ಯಾಸ, ಬೆಣ್ಣೆಯ ಸುವಾಸನೆ, ರುಚಿಕರ ಪಲ್ಯ ಮತ್ತು ಚಟ್ನಿಯ ಸಂಯೋಜನೆ ಆಹಾರ ಪ್ರಿಯರ ಮನಸೆಳೆಯುತ್ತಿದೆ. ಒಮ್ಮೆ ಸವಿದರೆ ಮತ್ತೊಮ್ಮೆ ತಿನ್ನಬೇಕೆನ್ನಿಸುವ ಸ್ವಾದವೇ ಇದರ ವಿಶೇಷತೆ. ಸಾಂಸ್ಕೃತಿಕ ನಗರಿ ಮೈಸೂರು ಈಗಾಗಲೇ ಅರಮನೆ, ದಸರಾ ಮತ್ತು ಪರಂಪರೆಗೆ ಹೆಸರುವಾಸಿಯಾಗಿದ್ದು, ಇದೀಗ ಆಹಾರ ಲೋಕದಲ್ಲೂ ತನ್ನದೇ ಛಾಪು ಮೂಡಿಸಿದೆ.
ಮೈಸೂರಿಗೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಮಸಾಲೆ ದೋಸೆ ಸವಿಯದೆ ಹಿಂದಿರುಗುವುದೇ ಇಲ್ಲ ಎನ್ನಬಹುದು. ಪ್ರವಾಸಿಗರು ಕೂಡ ಮೈಸೂರು ದೋಸೆಯ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗ ಫಾತಿಮಾ ಮಾತನಾಡಿ, “ಮೈಸೂರಿನ ಮಸಾಲೆ ದೋಸೆ ಅತ್ಯಂತ ರುಚಿಕರವಾಗಿದೆ. ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಸ್ವಾದ ಇದೆ” ಎಂದರು.
ಇನ್ನೋರ್ವ ಪ್ರವಾಸಿಗ ರಾಜು ಭಕ್ಷಿ, “ಹಲವು ಕಡೆ ದೋಸೆ ತಿಂದಿದ್ದೇನೆ. ಆದರೆ ಮೈಸೂರಿನ ಮಸಾಲೆ ದೋಸೆಯ ರುಚಿ ವಿಭಿನ್ನವಾಗಿದೆ” ಎಂದು ಹೇಳಿದರು. ಹೋಟೆಲ್ ಉದ್ಯಮಿ ಪ್ರಸಾದ್ ಮಾತನಾಡಿ, “ದಶಕಗಳಿಂದ ಮಸಾಲೆ ದೋಸೆ ಮೈಸೂರಿನ ಗುರುತಾಗಿದೆ. ಈಗ ವಿಶ್ವ ಮಾನ್ಯತೆ ಸಿಕ್ಕಿರುವುದು ಸಂತಸದ ಸಂಗತಿ” ಎಂದು ಅಭಿಪ್ರಾಯಪಟ್ಟರು. ಒಟ್ಟಾರೆಯಾಗಿ, ಮೈಸೂರು ಮಸಾಲೆ ದೋಸೆ ಈಗ ಕೇವಲ ದಕ್ಷಿಣ ಭಾರತದ ಆಹಾರವಲ್ಲ… ಜಗತ್ತೇ ಮೆಚ್ಚಿದ ಭಾರತೀಯ ರುಚಿಯ ಪ್ರತೀಕವಾಗಿ ಹೊರಹೊಮ್ಮಿದೆ.



