HomeNEWSಕರ್ನಾಟಕದಲ್ಲಿ SIR ಪೂರ್ಣ: 1.07 ಕೋಟಿ ಮತದಾರರು ಕರಡು ಪಟ್ಟಿಯಿಂದ ಹೊರಗೆ, ಹೆಸರು ಸೇರ್ಪಡೆಗೆ ಅವಕಾಶ

ಕರ್ನಾಟಕದಲ್ಲಿ SIR ಪೂರ್ಣ: 1.07 ಕೋಟಿ ಮತದಾರರು ಕರಡು ಪಟ್ಟಿಯಿಂದ ಹೊರಗೆ, ಹೆಸರು ಸೇರ್ಪಡೆಗೆ ಅವಕಾಶ

-

spot_img

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಸೋಮವಾರ (ಆ.24) ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪರಿಷ್ಕರಣೆ ವೇಳೆ 1,07,96,339 ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ.
SIR ಪ್ರಕ್ರಿಯೆಯಡಿ ಜೂನ್ 30ರಿಂದ ಆಗಸ್ಟ್ 17ರವರೆಗೆ ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸಲಾಗಿತ್ತು. ಇದೀಗ ಪರಿಶೀಲನೆಯ ಬಳಿಕ ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ.

5.54 ಕೋಟಿಯಿಂದ 4.46 ಕೋಟಿ ಮತದಾರರು

SIR ಪ್ರಕ್ರಿಯೆ ಆರಂಭಕ್ಕೂ ಮುನ್ನ ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರು ಇದ್ದರು. ಕರಡು ಪಟ್ಟಿಯಲ್ಲಿ 4,46,35,975 ಮತದಾರರು ದಾಖಲಾಗಿದ್ದಾರೆ. ಇವರಲ್ಲಿ 2,22,01,727 ಪುರುಷರು, 2,24,75,553 ಮಹಿಳೆಯರು ಹಾಗೂ 2,871 ಇತರೆ ಮತದಾರರು ಇದ್ದಾರೆ.
ಮತದಾರರ ಮಾಹಿತಿಯ ಡಿಜಿಟಲೀಕರಣವೂ SIR ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, 4,46,35,975 ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ.

1.07 ಕೋಟಿ ಮತದಾರರು ASDDO ಪಟ್ಟಿಗೆ ಏಕೆ?

SIR ಸಂದರ್ಭದಲ್ಲಿ 1,07,96,339 ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ASDDO ಎಂದರೆ ಗೈರುಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಅಥವಾ ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿತರಾದವರು ಹಾಗೂ ಇತರೆ ವರ್ಗಗಳನ್ನು ಒಳಗೊಂಡಿದೆ.
ಈ ಪೈಕಿ:
65,45,679 — ಶಾಶ್ವತವಾಗಿ ಸ್ಥಳಾಂತರಗೊಂಡವರು
16,39,864 — ಮೃತಪಟ್ಟವರು
15,17,042 — ಪರಿಶೀಲನೆ ವೇಳೆ ಗೈರುಹಾಜರಾಗಿದ್ದವರು
7,09,870 — ನಕಲಿ/ಡುಪ್ಲಿಕೇಟ್ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು
3,83,884 — ಇತರೆ ವರ್ಗದವರು ಎಂದು ಚುನಾವಣಾ ಇಲಾಖೆಯ ಮಾಹಿತಿ ತಿಳಿಸಿದೆ.

ಹೆಸರು ಹೊರಗಿದ್ದರೆ ಆತಂಕ ಬೇಡ

ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಮತದಾನದ ಹಕ್ಕು ಶಾಶ್ವತವಾಗಿ ಕಳೆದುಹೋಯಿತು ಎಂದರ್ಥವಲ್ಲ. ಅರ್ಹ ಮತದಾರರಿಗೆ ತಮ್ಮ ಹೆಸರು ಮತ್ತೆ ಸೇರ್ಪಡೆಗೊಳಿಸಲು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಕಾಶವಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಹೆಸರು ಅಥವಾ ಮಾಹಿತಿಯಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಫಾರ್ಮ್-8 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

43.81 ಲಕ್ಷ ಮತದಾರರಿಗೆ ನೋಟಿಸ್

SIR ಪರಿಶೀಲನೆಯಲ್ಲಿ ಕೆಲವು ಮತದಾರರ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ 43,81,335 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ. ಇವರಲ್ಲಿ SIR ಸಂದರ್ಭದಲ್ಲಿ ವ್ಯತ್ಯಾಸ ಕಂಡುಬಂದ 20,35,835 ಮಂದಿ ಹಾಗೂ ಮ್ಯಾಪಿಂಗ್ ಆಗದ 23,45,500 ಮಂದಿ ಸೇರಿದ್ದಾರೆ. ಈ ಪ್ರಕ್ರಿಯೆಗೆ ಹೆಚ್ಚುವರಿಯಾಗಿ 3,926 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು (AERO) ನಿಯೋಜಿಸಲಾಗಿದೆ.

ಅಕ್ಟೋಬರ್ 27ರಂದು ಅಂತಿಮ ಪಟ್ಟಿ

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಇದೀಗ ಹಕ್ಕು ಮತ್ತು ಆಕ್ಷೇಪಣೆಗಳ ಹಂತ ಆರಂಭವಾಗಿದೆ. ಸೆಪ್ಟೆಂಬರ್ 23ರವರೆಗೆ ಸಲ್ಲಿಕೆಯಾಗುವ ಅರ್ಜಿಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಕ್ಟೋಬರ್ 27, 2026ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ವೇಳಾಪಟ್ಟಿ ನಿಗದಿಯಾಗಿದೆ.

LEAVE A REPLY

Please enter your comment!
Please enter your name here

- Advertisment -spot_img