2026ರ ಮೇಲೆ ನೇತಾಡುತ್ತಿದೆ ‘ಸೂಪರ್ ಎಲ್ ನಿನೋ’ ಎಂಬ ಅಪಾಯದ ತೂಗುಗತ್ತ್ತಿ…
ಪ್ರಕೃತಿಯ ಶಾಂತ ಮುಖದ ಹಿಂದೆ ಸದ್ದಿಲ್ಲದೆ ಸಾಗುತ್ತಿದೆ ಒಂದು ಅತೀ ಅಪಾಯಕಾರಿಯಾದ ದೊಡ್ಡ ಬದಲಾವಣೆ.
ಹೌದು, ಸದ್ಯ ಅಪಾಯದಲ್ಲಿದೆ ಭೂಮಿಯ ಜೀವಸಂಕುಲ.
ಜಗತ್ತಿನ ಹವಾಮಾನ ನಿಧಾನವಾಗಿ ಬದಲಾಗುತ್ತಿದೆ ಎಂಬುದು ಈಗಾಗಲೇ ಪ್ರತಿ ದಿನ ನಮ್ಮ ಅನುಭವಕ್ಕೆ ಬರುತ್ತಿದೆ. ಒಂದೆಡೆ ಅಸಹನೀಯ ಬಿಸಿಲು, ಮತ್ತೊಂದೆಡೆ ಅನಿರೀಕ್ಷಿತ ಮಳೆ, ಇನ್ನೂ ಕೆಲವೆಡೆ ತಿಂಗಳುಗಟ್ಟಲೆ ಬರ… ಇವು ಸಾಮಾನ್ಯ ಘಟನೆ ಎಂದು ಉಡಾಫೆ ಮಾಡುವಂತವು ಅಲ್ಲ. ಕಳೆದ ಹಲವು ವರ್ಷಗಳಿಂದ ನಾವು ಈ ಘಟನೆಯನ್ನು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಈಗ ಭೂಮಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ದೊಡ್ಡ ಅನಾಹುತವೊಂದಕ್ಕೆ ಮುನ್ನುಡಿ ಬರೆಯುತ್ತಿದೆ.
ಅಗೋಚರವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯ ಹೆಸರು ಎಲ್ ನಿನೋ. ಈ ಬಾರಿ ಅದು ‘ಸೂಪರ್ ಎಲ್ ನಿನೋ’ ಮಟ್ಟಕ್ಕೆ ಏರುತ್ತಿದೆ ಎಂಬ ಎಚ್ಚರಿಕೆ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ.
ಏನಿದು ಎಲ್ ನಿನೋ? ಸೂಪರ್ ಎಲ್ ನಿನೋ?
ಎಲ್ ನಿನೋ, ಸೂಪರ್ ಎಲ್ ನಿನೋ ಎರಡೂ ಹವಾಮಾನ ಸಂಬಂಧಿತ ಪದಗಳಾದರೂ ಅವುಗಳ ತೀವ್ರತೆಯಲ್ಲಿ ಬಹಳಷ್ಟು ದೊಡ್ಡ ವ್ಯತ್ಯಾಸ ಇದೆ.
ವಿಶ್ವದಲ್ಲಿ ಅತೀ ದೊಡ್ಡದಾಗಿರುವ ಫೆಸಿಫಿಕ್ ಮಹಾಸಾಗರ ಜಾಗತಿಕ ಹವಾಮಾನದ ಮೇಲೆ ತನ್ನದೇ ಆದ ಹಿಡಿತ ಹೊಂದಿದೆ. ಇಲ್ಲಿ ನೀರು ಒಂದು ಸಮತೋಲನದಲ್ಲಿ ಇರುತ್ತದೆ. ಆದರೆ ಕೆಲವು ವರ್ಷಗಳಿಗೊಮ್ಮೆ ಈ ಸಮತೋಲನದಲ್ಲಿ ವ್ಯತ್ಯಾಸವಾಗುತ್ತದೆ. ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚಾಗಿ, ಗಾಳಿಯ ದಿಕ್ಕು ಮತ್ತು ಮಳೆಯ ಮಾದರಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಇದೇ ಪ್ರಕ್ರಿಯೆಯೇ ‘ಎಲ್ ನಿನೋ’.
ಇದು ಪ್ರಾರಂಭವಾದಾಗ ಅದರ ಅಡ್ಡ ಪರಿಣಾಮಗಳು ಕೇವಲ ಒಂದೇ ದೇಶಕ್ಕೆ ಸೀಮಿತವಾಗುವುದಿಲ್ಲ. ಜಗತ್ತಿನಾದ್ಯಂತ ಹವಾಮಾನದಲ್ಲಿ ಹಲ್‌ಚಲ್ ಸೃಷ್ಟಿಯಾಗುತ್ತದೆ.
ಎಲ್ ನಿನೋ ಸಾಮಾನ್ಯ ಘಟನೆ. ಆದರೆ ಇದೇ ತೀವ್ರ ಮಟ್ಟಕ್ಕೆ ಏರಿದಾಗ ಅದನ್ನು ‘ಸೂಪರ್ ಎಲ್ ನಿನೋ’ ಎಂದು ಗುರುತಿಸಲಾಗುತ್ತದೆ. ಇದು ಅಪರೂಪ. ಆದರೆ ಪರಿಣಾಮಗಳು ಭೀಕರ. ಅಂದಹಾಗೆ ಇದೇ ವರ್ಷ ಈ ಘಟನೆ ಘಟಿಸುತ್ತಿದೆ.
ಇದು ಜಗತ್ತಿಗೊಂದು ‘ಟರ್ನಿಂಗ್ ಪಾಯಿಂಟ್’?
ಈ ಹಿಂದೆ ಸೂಪರ್ ಎಲ್‌ನಿನೋ ನಡೆದಾಗಲೆಲ್ಲ ಜಗತ್ತಿನಲ್ಲಿ ದೊಡ್ಡ ಮಟ್ಟದ ಬರ, ಭಾರೀ ಪ್ರವಾಹ, ಬರ, ಸಾವು ನೋವುಗಳು ಉಂಟಾಗಿದೆ. ಈ ಬಾರಿ 2026ನ್ನು ವಿಜ್ಞಾನಿಗಳು ಒಂದು ‘ಟರ್ನಿಂಗ್ ಪಾಯಿಂಟ್’ ಆಗಿ ನೋಡುತ್ತಿದ್ದಾರೆ. ಹಿಂದೆಂದಿಗಿಂತಲೂ ಎಲ್ ನಿನೋ ಪ್ರಭಾವ ಈ ಬಾರಿ ತೀವ್ರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸೂಪರ್ ಎಲ್ ನಿನೋ ಒಂದು ದೇಶದ ಸಮಸ್ಯೆ ಅಲ್ಲ. ಅದು ಜಾಗತಿಕ ಸಮಸ್ಯೆ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ತೀವ್ರ ಬರ ಕಾಣಿಸಿಕೊಳ್ಳಬಹುದು. ಇತ್ತ ಅಮೆರಿಕಾದ ಕೆಲವು ಭಾಗಗಳಲ್ಲಿ ಪ್ರವಾಹ ಹೆಚ್ಚಾಗಬಹುದು. ಜೊತೆಗೆ ಜಾಗತಿಕವಾಗಿ ಹೀಟ್‌ವೇವ್ಸ್ ಹೆಚ್ಚಾಗುವುದು, ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳಬಹುದು.
ಭಾರತಕ್ಕೇನು ಸಂಕಷ್ಟ?
ಭಾರತದ ಕೃಷಿ, ಆರ್ಥಿಕತೆ ಬಹುಪಾಲು ಮಾನ್ಸೂನ್ ಮೇಲೆಯೇ ಅವಲಂಬಿತವಾಗಿದೆ. ಸೂಪರ್ ಎಲ್ ನಿನೋ ಬಂದಾಗ ಮಾನ್ಸೂನ್ ದುರ್ಬಲವಾಗುವ ಸಾಧ್ಯತೆ ಹೆಚ್ಚು. ಪರಿಣಾಮ, ಮಳೆ ಪ್ರಮಾಣ ಕಡಿಮೆಯಾಗಬಹುದು, ಮಳೆ ತಡವಾಗಿ ಆರಂಭವಾಗಬಹುದು, ಕೆಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಉಂಟಾಗಬಹುದು. ಈ ಬೆಳವಣಿಗೆ ನೇರವಾಗಿ ಕೃಷಿ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಬೆಳೆ ಉತ್ಪಾದನೆ ಕುಸಿತ, ರೈತರ ಆದಾಯ ಇಳಿಕೆ, ಮೇವು ಕೊರತೆ, ಕೃಷಿ ಸಾಲದ ಒತ್ತಡ ಹೆಚ್ಚಳ ಕಾಣಿಸಿಕೊಂಡು ಗ್ರಾಮೀಣ ಆರ್ಥಿಕತೆ ಬುಡಮೇಲುಗೊಳ್ಳುತ್ತದೆ.
ಇನ್ನು ಮಳೆ ಕೊರತೆ, ಜಲ ಸಂಪನ್ಮೂಲಗಳ ಮೇಲೆ ಕೂಡಾ ದೊಡ್ಡ ಪರಿಣಾಮ ಬೀರುತ್ತದೆ. ಕೆರೆ, ಅಣೆಕಟ್ಟುಗಳು ತುಂಬುವುದಿಲ್ಲ, ಅಂತರ್ಜಲ ಮಟ್ಟ ಇಳಿಯುತ್ತದೆ, ನಗರಗಳಲ್ಲಿ ನೀರಿನ ಕೊರತೆ ಹೆಚ್ಚಾಗುತ್ತದೆ, ವಿಶೇಷವಾಗಿ ದೊಡ್ಡ ನಗರಗಳಲ್ಲಿ ನೀರಿನ ನಿರ್ವಹಣೆಯೇ ದೊಡ್ಡ ಸವಾಲಾಗುತ್ತದೆ.
ಜೊತೆಗೆ ಎಲ್ ನಿನೋ ಸಮಯದಲ್ಲಿ ಸಾಮಾನ್ಯವಾಗಿ ತಾಪಮಾನ ಹೆಚ್ಚಾಗುವುದರಿಂದ ಎಲ್ಲೆಡೆ ತೀವ್ರ ಬಿಸಿಲು, ಹೀಟ್‌ವೇವ್ ಹೆಚ್ಚಳ, ಆರೋಗ್ಯ ಸಮಸ್ಯೆಗಳು ಕೂಡಾ ಸವಾಲಾಗಲಿವೆ. ಇನ್ನು ಕೃಷಿ ಉತ್ಪಾದನೆ ಕಡಿಮೆಯಾದರೆ ಆಹಾರ, ತರಕಾರಿ, ಧವಸ ಧಾನ್ಯಗಳ ದರ ಗಗನಕ್ಕೇರಿ, ಸಾಮಾನ್ಯ ಜನರ ಜೀವನಮಟ್ಟವನ್ನೂ ದುರ್ಬಲಗೊಳಿಸುತ್ತದೆ. ಇದು ಈಗಾಗಲೇ ನಿಧಾನವಾಗಿ ಅನುಭವಕ್ಕೆ ಬರಲಾರಂಭಿಸಿದೆ.
ಭೂಮಿಯ ಸರಾಸರಿ ತಾಪಮಾನ ಕಳೆದ ಹಲವು ವರ್ಷಗಳಿಂದ ಸತತವಾಗಿ ಏರಿಕೆಯಾಗುತ್ತಿದೆ. ಸಮುದ್ರಗಳು ಬಿಸಿಯಾಗಿವೆ. ಈ ಪರಿಸ್ಥಿತಿಯಲ್ಲಿ ಎಲ್ ನಿನೋ ಉಂಟಾದರೆ ಅದು ಸಾಮಾನ್ಯ ಮಟ್ಟದಲ್ಲೇ ನಿಲ್ಲುವುದಿಲ್ಲ. ಅದು ಸೂಪರ್ ಮಟ್ಟಕ್ಕೆ ಏರುವುದರಲ್ಲಿ ಅನುಮಾನ ಬೇಕಿಲ್ಲ. ಈ ಬೆಳವಣಿಗೆಗಳನ್ನು ಭೂಮಿ ನಮಗೆ ನೀಡುತ್ತಿರುವ ಎಚ್ಚರಿಕೆ ಎಂದು ಪರಿಗಣಿಸಬೇಕು. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂದೇ ನೀರಿನ ಸಂರಕ್ಷಣೆ, ಮರಗಿಡಗಳ ಸಂಖ್ಯೆ ಹೆಚ್ಚಿಸುವುದು, ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವುದು ಮಾಡಿಕೊಂಡಲ್ಲಿ ಒಂದಿಷ್ಟು ಬದಲಾವಣೆ ಕಾಣಬಹುದು.
ಅಂದಹಾಗೆ ಇದು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವ ಮಾತಲ್ಲ. ಸರ್ಕಾರ ಮತ್ತು ಜನರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪರಿಣಾಮ ಬೀರಬಹುದು. ಜಾಗತಿಕ ತಾಪಮಾನ ಇಳಿಕೆಗೆ ನೀವು ಕೈಗೊಂಡ ನಿರ್ಧಾರಗಳೇನು? ಬನ್ನಿ ಮಾತಾಡೋಣ, ನಿಮ್ಮ ಅಭಿಪ್ರಾಯಗಳನ್ನು ದೇಸೀ ಪೋಸ್ಟ್ ನಿರೀಕ್ಷಿಸುತ್ತಿದೆ.




